HomeKarnatakaBREAKING : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026: ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ...

BREAKING : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026: ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ದಸರಾ ಜಂಬೂಸವಾರಿಯ ಪ್ರಮುಖ ಆನೆಗಳ ಆಯ್ಕೆ ಕುರಿತು ಕುತೂಹಲ ಮೂಡಿದ್ದು, ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.ರಾಜಮಾತೆ  ಪ್ರಮೋದಾ ದೇವಿ ಒಡೆಯರ್ ಈ ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹೌದು. ಮೈಸೂರು ದಸರಾ ಮಹೋತ್ಸವ 2026ಕ್ಕೆ ಗಜಪಡೆ ಸಜ್ಜಾಗುತ್ತಿದ್ದು, ಈ ಬಾರಿ ಪಟ್ಟದ ಆನೆಯ ಜವಾಬ್ದಾರಿಯನ್ನು ಶ್ರೀಕಂಠ ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾನೆ. ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆಯಾಗಿದ್ದು, ಕಳೆದ ಬಾರಿಯೂ ಪಟ್ಟದ ಆನೆಯಾಗಿ ಶ್ರೀಕಂಠನೇ ಅಂಬಾರಿ ಹೊತ್ತು ಗಮನ ಸೆಳೆದಿದ್ದನು.

ದಸರಾ ಮಹೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ಗಜಪಡೆಯ ಆನೆಗಳ ಆರೋಗ್ಯ, ಸಾಮರ್ಥ್ಯ, ಅನುಭವ ಹಾಗೂ ತಾಲೀಮು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಜವಾಬ್ದಾರಿಗಳನ್ನು ನಿಗದಿಪಡಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರ ಮತ್ತು ತಾಲೀಮಿನ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯದ ಮೇಲೂ ವಿಶೇಷ ನಿಗಾ ವಹಿಸಲಾಗುತ್ತಿದೆ. ಅಂತಿಮ ಹಂತದ ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಹೊರುವ ಆನೆಯ ಆಯ್ಕೆ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಅಂತಿಮಗೊಳಿಸಲಾಗುತ್ತದೆ.

ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಶ್ರೀಕಂಠ ಹಾಗೂ ಏಕಲವ್ಯ ಪ್ರಮುಖ ಆನೆಗಳಾಗಿ ಕಾಣಿಸಿಕೊಳ್ಳಲಿರುವುದು ಗಜಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಇನ್ನೂ,  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ವನ್ನು ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ದಸರಾ ಮಹೋತ್ಸವಕ್ಕೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.

ಏರ್‌ಶೋ, ಡ್ರೋನ್ ಶೋಗೆ ಸಿದ್ಧತೆ

ಈ ಬಾರಿ ಮೈಸೂರು ದಸರಾ ವೇಳೆ ಏರ್‌ಶೋ ಆಯೋಜಿಸುವ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕಳೆದ ವರ್ಷದ ಮಾದರಿಯಲ್ಲಿ ಡ್ರೋನ್ ಶೋ ನಡೆಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ವಿವಿಧ ದೇಶಗಳ ರಾಯಭಾರಿಗಳು ಹಾಗೂ ಅಧಿಕಾರಿಗಳನ್ನು ದಸರಾಗೆ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸೇನಾಪಡೆ, ಇಸ್ರೋ, ಡಿಆರ್‌ಡಿಒಗೆ ಆಹ್ವಾನ

ದಸರಾ ಕಾರ್ಯಕ್ರಮಗಳಲ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ತಂಡಗಳು ಭಾಗವಹಿಸುವಂತೆ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಸ್ತಬ್ಧಚಿತ್ರ ಮತ್ತು ಕವಾಯತು ಪ್ರದರ್ಶನದಲ್ಲೂ ಸೇನಾಪಡೆಗಳ ತಂಡಗಳಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.ಇದರ ಜತೆಗೆ ಇಸ್ರೋ, ಡಿಆರ್‌ಡಿಒ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ದಸರಾ ಮಹೋತ್ಸವಕ್ಕೆ ಆಹ್ವಾನ ನೀಡಲು ಸೂಚಿಸಲಾಗಿದೆ. ರಾಜ್ಯದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಕಲಾತಂಡಗಳಿಗೆ ದಸರಾ ವೇದಿಕೆಯಲ್ಲಿ ಅವಕಾಶ ಕಲ್ಪಿಸುವಂತೆಯೂ ಸೂಚಿಸಲಾಗಿದೆ.

ಟಿಕೆಟ್ ಪಡೆದವರಿಗೆ ಸೂಕ್ತ ಆಸನ ವ್ಯವಸ್ಥೆ

ದಸರಾ ಕಾರ್ಯಕ್ರಮಗಳಿಗೆ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ವ್ಯವಸ್ಥಿತವಾಗಿ ನಡೆಸಲು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಪ್ರತಿದಿನ ಒಬ್ಬ ಸಚಿವರನ್ನು ನಿಯೋಜಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಪ್ರಚಾರ

ಮೈಸೂರು ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಲಾಗಿದೆ. ದಸರಾ ಮಹೋತ್ಸವದ ಮೂಲಕ ಮೈಸೂರಿನ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ವೈಭವವನ್ನು ದೇಶ-ವಿದೇಶಗಳಿಗೆ ಪರಿಚಯಿಸಲು ಸರ್ಕಾರ ಉದ್ದೇಶಿಸಿದೆ.

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಏರ್‌ಶೋ, ಡ್ರೋನ್ ಶೋ, ಸೇನಾಪಡೆಗಳ ಪ್ರದರ್ಶನ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮೈಸೂರು ದಸರಾವನ್ನು ಮತ್ತಷ್ಟು ಆಕರ್ಷಕಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular