ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ನೇಣು ಬಿಗಿದುಕೊಂಡು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುರುವೇಕೆರೆಯ ಬ್ರಾಹ್ಮಣರ ಬೀದಿಯಲ್ಲಿ ಘಟನೆ ನಡೆದಿದೆ. ತಾಯಿ ಕಮಲಮ್ಮ(78), ಪುತ್ರ ರಘು(55) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಇಬ್ಬರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪ್ರೌಢಶಾಲೆಯೊಂದರಲ್ಲಿ ರಘು ಎಸ್.ಡಿ.ಎ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಲವು ದಿನಗಳಿಂದ ತಾಯಿ, ಮಗ ಅನಾರೋಗ್ಯದಿಂದ ಬಳಲುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಕಮಲಮ್ಮ ಮತ್ತು ರಘು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಬೆಂಗಳೂರಿನಲ್ಲಿ ಕಮಲಮ್ಮನವರ ಎರಡನೇ ಪುತ್ರ ವಾಸವಾಗಿದ್ದಾರೆ. ಅವರು ಕರೆ ಮಾಡಿದರೂ ತಾಯಿ ಕಮಲಮ್ಮ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಕರೆ ಮಾಡಿ ಗಮನಿಸಲು ಹೇಳಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತುರುವೇಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.