ಬೆಂಗಳೂರು: ನಿನ್ನೆ ಸಂಜೆ ಕಬ್ಬನ್ ಪಾರ್ಕ್ ನ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಿ.ಎಂ.ಆರ್.ಸಿ.ಎಲ್. ನಿರ್ವಹಣಾ ತಂಡಗಳು ಸರಿಪಡಿಸುವಲ್ಲಿ ಯಶಸ್ವಿಯಾಗಿವೆ.
ಇಂದು ಮುಂಜಾನೆ 5.21ಕ್ಕೆ ಕಬ್ಬನ್ ಪಾರ್ಕ್ ಗೆ ಮೆಟ್ರೋ ರೈಲು ಆಗಮಿಸಿದೆ. ಮುಂಜಾನೆ 3.30ರ ಸುಮಾರಿಗೆ ಸಮಸ್ಯೆ ಬಗೆಹರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ವೇಳಾಪಟ್ಟಿಯಂತೆ ಸಂಪೂರ್ಣವಾಗಿ ಮೆಟ್ರೋ ಸೇವೆ ಪುನರಾರಂಭಗೊಂಡಿದೆ. ಮುಂಜಾನೆ 5.21ಕ್ಕೆ ಮೆಟ್ರೋ ರೈಲು ಕಬ್ಬನ್ ಪಾರ್ಕ್ ನಿಲ್ಡಾಣಕ್ಕೆ ಆಗಮಿಸಿದೆ.
ಕಾಡುಗೋಡಿಯಿಂದ ಕಬ್ಬನ್ ಪಾರ್ಕ್ ಗೆ ಮೆಟ್ರೋ ರೈಲು ಆಗಮಿಸಿದ್ದು, ಈ ಮೂಲಕ ಕಾಡುಗೋಡಿಯಿಂದ ಚೆಲ್ಲಾಘಟ್ಟವರೆಗಿನ ನಮ್ಮ ಮೆಟ್ರೋ ನೇರಳೆ ಮಾರ್ಗ ಯಥಾಸ್ಥಿತಿಗೆ ಮರಳಿದೆ.
ಸತತ 9 ಗಂಟೆ ಕಾಲ ರಿಪೇರಿ ಮಾಡಲಾಗಿದೆ. ತಾಂತ್ರಿಕ ದೋಷವನ್ನು ಸಿಬ್ಬಂದಿ ಸರಿಪಡಿಸಿದ್ದು, ಮುಂಜಾನೆಯಿಂದ ಮೆಟ್ರೋ ಸಂಚಾರ ಯಥಾಸ್ಥಿತಿಗೆ ಬಂದಿದೆ.

