ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಕ್ತಪಾತ ಮುಂದುವರಿದಿದ್ದು, ಶುಕ್ರವಾರ ಮಸೀದಿಯೊಂದರ ಸಮೀಪ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಧಾರ್ಮಿಕ ಕೇಂದ್ರವೊಂದರಲ್ಲಿ ನಡೆದ ಸ್ಫೋಟದಲ್ಲಿ ಹಲವಾರು ಜನರು ಮೃತಪಟ್ಟು, ಹಲವಾರು ಜನ ಗಾಯಗೊಂಡಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಫೆಡರಲ್ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ ತೆರ್ಲೈ ಇಮಾಂಬರ್ಗಾದಲ್ಲಿ (Tarlai Imambargah) ಈ ಸ್ಫೋಟ ಸಂಭವಿಸಿದೆ.. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿವೆ ಮತ್ತು ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ರಕ್ಷಣಾ ತಂಡಗಳು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿವೆ.ಸಾವಿನ ಸಂಖ್ಯೆ ಇನ್ನಷ್ಟೇ ನಿಖರವಾಗಿ ತಿಳಿದು ಬರಬೇಕಿದೆ.
ಹೆಚ್ಚುತ್ತಿರುವ ಉಗ್ರರ ಅಟ್ಟಹಾಸ
ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳು ನಡೆಯುತ್ತಿವೆ. ಇಂದೇ ಬಲೂಚಿಸ್ತಾನದ ಗಡ್ಚಿರೋಲಿ ಗಡಿಯಲ್ಲಿ ನಡೆದ ಎನ್ಕೌಂಟರ್ ಬೆನ್ನಲ್ಲೇ ಈ ಘಟನೆ ನಡೆದಿರುವುದು ಅಲ್ಲಿನ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಯಾವುದೇ ಉಗ್ರ ಸಂಘಟನೆ ಈವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಪೊಲೀಸರು ಮತ್ತು ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ತನಿಖೆ ಕೈಗೊಂಡಿದ್ದಾರೆ.

