ಖತಾರ್‌ನ ಪ್ರಮುಖ ರಾಸ್ ಲಫಾನ್ (Ras Laffan) ಕೈಗಾರಿಕಾ ಪ್ರದೇಶದಲ್ಲಿರುವ ಬರ್ಜಾನ್ ಅನಿಲ ಸರಬರಾಜು ಘಟಕದಲ್ಲಿ ಭಾನುವಾರ ರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 54 ಕಾರ್ಮಿಕರು ಗಾಯಗೊಂಡಿದ್ದು, ಇನ್ನೂ 18 ಮಂದಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಸ್ಫೋಟದ ಬಳಿಕ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಾಚರಣೆ ಮರುಪ್ರಾರಂಭದ ವೇಳೆ ಅವಘಡ
ಇರಾನ್‌ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಖತಾರ್‌ನ ಅನಿಲ ರಫ್ತು ಚಟುವಟಿಕೆಗಳಿಗೆ ತಾತ್ಕಾಲಿಕ ಪರಿಣಾಮ ಬೀರಿತ್ತು. ಬಳಿಕ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ರಾಸ್ ಲಫಾನ್ ರಫ್ತು ಟರ್ಮಿನಲ್‌ನಲ್ಲಿ ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಜಾಗತಿಕ ಇಂಧನ ಮಾರುಕಟ್ಟೆಗೆ ಹೊಡೆತ?
ಖತಾರ್ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಉತ್ಪಾದಕರಲ್ಲಿ ಒಂದಾಗಿದೆ. ರಾಸ್ ಲಫಾನ್ ಕೈಗಾರಿಕಾ ಪ್ರದೇಶವು ದೇಶದ ಪ್ರಮುಖ LNG (ದ್ರವೀಕೃತ ನೈಸರ್ಗಿಕ ಅನಿಲ) ಸಂಸ್ಕರಣೆ ಮತ್ತು ರಫ್ತು ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಕೇಂದ್ರದಲ್ಲಿ ಸಂಭವಿಸಿರುವ ಅವಘಡವು ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಾನಿಯ ಅಂದಾಜು ಮುಂದುವರಿಕೆ
ಸ್ಫೋಟದಿಂದ ಘಟಕಕ್ಕೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಖತಾರ್ ಅಧಿಕಾರಿಗಳು ಘಟನೆ ಕುರಿತು ತನಿಖೆ ಆರಂಭಿಸಿದ್ದು, ನಾಪತ್ತೆಯಾಗಿರುವ 18 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ತಾಂತ್ರಿಕ ದೋಷವೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

