ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ನವಜಾತ ಶಿಶುಗಳು ಮೃತಪಟ್ಟಿವೆ. ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS)ನ ಸ್ತ್ರೀರೋಗ ವಿಭಾಗದ ನರ್ಸರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಮೂರನೇ ಮಹಡಿಯಲ್ಲಿದ್ದ ನರ್ಸರಿಯಲ್ಲಿ ಒಟ್ಟು 16 ನವಜಾತ ಶಿಶುಗಳು ಇದ್ದವು. ಬೆಂಕಿ ಹೊತ್ತಿಕೊಂಡ ಬಳಿಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಒಂದು ಮಗುವನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನರ್ಸರಿಯಲ್ಲಿದ್ದ ಏರ್ ಕಂಡಿಷನರ್‌ನ ಕಂಪ್ರೆಸರ್ ಸ್ಫೋಟಗೊಂಡ ಬಳಿಕ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದರೆ ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಬೆಂಕಿ ಹಾಗೂ ದಟ್ಟ ಹೊಗೆ ನರ್ಸರಿಯನ್ನು ಆವರಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಿಟಕಿಯ ಗಾಜು ಒಡೆದು ಒಳನುಗ್ಗಿ ಶಿಶುಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಜಿಲ್ಲಾಡಳಿತ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಬೆಂಕಿ ಮಾತೃ ಮತ್ತು ಶಿಶು ಆರೋಗ್ಯ (MCH) ವಿಭಾಗದಲ್ಲಿ ಆರಂಭವಾಗಿತ್ತು. ಬೆಂಕಿಯಲ್ಲಿ 14 ನವಜಾತ ಶಿಶುಗಳ ದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಬೆಂಕಿಯನ್ನು ನಂದಿಸಿದ ಬಳಿಕ ಸ್ಥಳದಲ್ಲಿ ತಂಪುಗೊಳಿಸುವ ಕಾರ್ಯಾಚರಣೆಯನ್ನೂ ನಡೆಸಿವೆ. ಘಟನೆ ಕುರಿತು ತನಿಖೆ ನಡೆಸಲು ಹೆಚ್ಚುವರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಇಸ್ಲಾಮಾಬಾದ್‌ನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ PIMSನಲ್ಲಿ ಸಂಭವಿಸಿದ ಈ ದುರಂತದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

