ನವದೆಹಲಿ: ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಒಳ ಮೀಸಲಾತಿ ಜಾರಿ ಮಾಡಿದ್ದಾರೆ. ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಅವರು ನ್ಯಾ. ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನಾಗಮೋಹನದಾಸ್ ವರದಿ ತಿರಸ್ಕರಿಸಿ ಹೀಗೆ ಮಾಡಿದ್ದಾರೆ. ರಾಜಕೀಯ ಉಳಿವಿಗಾಗಿ ಮೂರು ಗುಂಪು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರ್ ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಜನಸಂಖ್ಯೆ ಆಧಾರದಡಿ ಮೀಸಲಾತಿ ಬದಲಾಯಿಸಬೇಕೆಂದು ತಿಳಿಸಿದ್ದಾರೆ. 101 ಜಾತಿಗಳು ಸೇರಿವೆ. ಸರ್ಕಾರ ಜಾತಿ ಹೆಚ್ಚು ಮಾಡಿದೆ. ಆದರೆ ಮೀಸಲಾತಿ ನೀಡಿಲ್ಲ. ಇದು ಬಹುದೊಡ್ಡ ದ್ರೋಹ. ರಾಜ್ಯ ಸರ್ಕಾರ ಸಮುದಾಯಕ್ಕೆ ಮಾಡಿದ ದೊಡ್ಡ ದ್ರೋಹ ಎಂದು ಹೇಳಿದ್ದಾರೆ.
ಜಾತಿ ಸೇರಿಸಿದಾಗ ಮೀಸಲಾತಿ ಹೆಚ್ಚು ಮಾಡಿಲ್ಲ. 75 ವರ್ಷದ ನಂತರ ಎಸ್ಸಿ ಎಸ್ಟಿಗೆ ಮೀಸಲಾತಿ ನೀಡಿದ್ದು ಬಿಜೆಪಿ. ನಾವು ಮಾಡಿದ್ದಕ್ಕೆ ಒಳ ಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ನೀವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದೀರಿ. ಅಲೆಮಾರಿಗಳು ಮತ್ತು ಪೌರಕಾರ್ಮಿಕರಿಗೆ ಏನೂ ಸಿಗುವುದಿಲ್ಲ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಲೆಮಾರಿಗಳು ಹೆಚ್ಚಾಗಿದ್ದಾರೆ. ಅಲೆಮಾರಿಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.