HomeKarnatakaBREAKING: ಸಚಿವ ಸ್ಥಾನ ದೊರೆಯದ ಭಾವೋದ್ವೇಗದಲ್ಲಿ ರಾಜೀನಾಮೆ ತೀರ್ಮಾನ ಕೈಗೊಳ್ಳಬೇಡಿ: ಅಸಮಾಧಾನಿತ ಶಾಸಕರಿಗೆ ಬಿ.ಕೆ. ಹರಿಪ್ರಸಾದ್...

BREAKING: ಸಚಿವ ಸ್ಥಾನ ದೊರೆಯದ ಭಾವೋದ್ವೇಗದಲ್ಲಿ ರಾಜೀನಾಮೆ ತೀರ್ಮಾನ ಕೈಗೊಳ್ಳಬೇಡಿ: ಅಸಮಾಧಾನಿತ ಶಾಸಕರಿಗೆ ಬಿ.ಕೆ. ಹರಿಪ್ರಸಾದ್ ಮನವಿ

ಬೆಂಗಳೂರು: ಸಚಿವ ಸ್ಥಾನ ದೊರೆಯದ ಭಾವೋದ್ವೇಗದಲ್ಲಿ ರಾಜೀನಾಮೆ ತೀರ್ಮಾನ ಕೈಗೊಳ್ಳಬೇಡಿ ಎಂದು ಅಸಮಾಧಾನಿತ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನಲೆಯಲ್ಲಿ ನಮ್ಮ ಶಾಸಕರು ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರದಲ್ಲಿ ಜವಾಬ್ದಾರಿ ವಹಿಸಬೇಕೆಂಬ ಅಪೇಕ್ಷೆ ಇರುವುದು ಸಹಜ. ಅವರ ಭಾವನೆಗಳನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ; ಪ್ರತಿಯೊಬ್ಬರ ಸೇವೆ, ಅನುಭವ ಮತ್ತು ಕೊಡುಗೆಯನ್ನು ಗೌರವದಿಂದಲೇ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

ಸಚಿವ ಸಂಪುಟದ ಸ್ಥಾನಗಳು ಸೀಮಿತವಾಗಿರುತ್ತವೆ. ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ವಿವಿಧ ಸಮುದಾಯಗಳ ಪ್ರಾತಿನಿಧ್ಯ, ಅನುಭವ, ಹೊಸ ನಾಯಕತ್ವ ಹಾಗೂ ಆಡಳಿತದ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ರಾಜ್ಯದ ನಾಯಕತ್ವ ಒಟ್ಟಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವ ಸ್ಥಾನ ಸಿಗದಿರುವುದು ಯಾರೊಬ್ಬರ ರಾಜಕೀಯ ಸೇವೆಯ ನಿರಾಕರಣೆಯೂ ಅಲ್ಲ; ಅವರ ಸಾಮರ್ಥ್ಯದ ಮೇಲಿನ ಅನುಮಾನವೂ ಅಲ್ಲ. ಅಧಿಕಾರವೇ ಪಕ್ಷಸೇವೆಯ ಏಕೈಕ ಮಾನದಂಡವಲ್ಲ. ಸರ್ಕಾರದೊಳಗೆ, ಪಕ್ಷದ ಸಂಘಟನೆಯಲ್ಲಿ ಹಾಗೂ ವಿವಿಧ ಜವಾಬ್ದಾರಿಗಳ ಮೂಲಕ ಜನಸೇವೆ ಮಾಡಲು ಅನೇಕ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಪಕ್ಷದ ಪ್ರತಿಯೊಬ್ಬ ಅರ್ಹ ನಾಯಕರಿಗೂ ಅವರ ಅನುಭವ ಮತ್ತು ಸಾಮರ್ಥ್ಯಕ್ಕೆ ತಕ್ಕ ಗೌರವ ದೊರೆಯಲಿದೆ ಎಂದು ಹೇಳಿದ್ದಾರೆ.

ಭಾವೋದ್ವೇಗದಲ್ಲಿ ರಾಜೀನಾಮೆಯಂತಹ ತೀರ್ಮಾನಗಳನ್ನು ಕೈಗೊಳ್ಳಬಾರದೆಂದು ಅಸಮಾಧಾನಗೊಂಡಿರುವ ನಮ್ಮ ಎಲ್ಲ ಸಹೋದ್ಯೋಗಿಗಳಲ್ಲಿ ಮನವಿ ಮಾಡುತ್ತೇನೆ. ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ಅವರ ನೋವು ಮತ್ತು ಅಭಿಪ್ರಾಯಗಳನ್ನು ಪಕ್ಷದ ರಾಷ್ಟ್ರೀಯ ನಾಯಕತ್ವದ ಗಮನಕ್ಕೆ ತರಲಾಗುವುದು. ಮಾತುಕತೆ ಮತ್ತು ಪರಸ್ಪರ ವಿಶ್ವಾಸದ ಮೂಲಕ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುವ ವಿಶಾಲ ಮನಸ್ಸು ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಹೇಳಿದ್ದಾರೆ.

ಸಚಿವರಾಗಿ ಆಯ್ಕೆಯಾಗಿರುವವರು ಪಕ್ಷದ ನಿಷ್ಠಾವಂತರು, ಸಮರ್ಥರು ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವವರು. ಅವರ ಆಯ್ಕೆಯನ್ನು ಎಲ್ಲರೂ ಗೌರವಿಸಿ, ಆಡಳಿತದಲ್ಲಿ ಯಶಸ್ವಿಯಾಗಲು ಸಹಕಾರ ನೀಡಬೇಕು. ನಮ್ಮ ಮುಂದೆ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಮತ್ತು ಜನಪರ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ದೊಡ್ಡ ಜವಾಬ್ದಾರಿಯಿದೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ಆಕಾಂಕ್ಷೆಗಳಿಗಿಂತ ಪಕ್ಷದ ಹಿತ, ಸರ್ಕಾರದ ಸ್ಥಿರತೆ ಮತ್ತು ಕರ್ನಾಟಕದ ಜನರ ನಿರೀಕ್ಷೆಗಳು ಮುಖ್ಯವಾಗಬೇಕು. ಎಲ್ಲ ಶಾಸಕರು ಹಾಗೂ ನೂತನ ಸಚಿವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಕಾಂಗ್ರೆಸ್ ಪಕ್ಷದ ಮೇಲಿರುವ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular