ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಗೆದ್ದುಕೊಂಡಿದ್ದು, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿನಂದಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ. ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಸಲಾ ಕಪ್ ನಮ್ದೇ! ಐಪಿಎಲ್ ಫೈನಲ್ ನಲ್ಲಿ ಈ ಮರೆಯಲಾಗದ, ಐತಿಹಾಸಿಕ ಗೆಲುವಿಗಾಗಿ ಆರ್.ಸಿ.ಬಿ.ಗೆ ಗೆ ಭಾರಿ ಅಭಿನಂದನೆಗಳು. 18 ವರ್ಷಗಳ ಉತ್ಸಾಹ, ನಿಷ್ಠೆ ಮತ್ತು ಎಂದಿಗೂ ಬಿಟ್ಟುಕೊಡದಿರುವುದು – ಮತ್ತು ಇಂದು ರಾತ್ರಿ, ಎಲ್ಲವೂ ಒಟ್ಟಿಗೆ ಬಂದವು! ನೀವು ಪ್ರತಿಯೊಬ್ಬ ಕನ್ನಡಿಗನ ಕನಸನ್ನು ನನಸಾಗಿಸಿದ್ದೀರಿ! ಇದು ಗೆಲುವಿಗಿಂತ ಹೆಚ್ಚಿನದು – ಇದು ಇಡೀ RCB ಸೈನ್ಯಕ್ಕೆ ಭಾವನಾತ್ಮಕ ಕ್ಷಣ. ಕರ್ನಾಟಕ ಹೆಮ್ಮೆಯಿಂದ ಘರ್ಜಿಸುತ್ತದೆ! ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

