ಬೆಂಗಳೂರು: ಬೈಕ್ ಗೆ ಕಾರ್ ಡಿಕ್ಕಿಯಾಗಿ ಫ್ಲೈ ಓವರ್ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಒನ್ ವೇ ನಲ್ಲಿ ವೇಗವಾಗಿ ಬಂದ ಕಾರ್ ಚಾಲಕನಿಂದ ಅಪಘಾತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಬಚಳ್ಳಿ ಗೇಟ್ ಫ್ಲೈ ಓವರ್ ಮೇಲೆ ಘಟನೆ ನಡೆದಿದೆ.
ಬೆಂಗಳೂರಿನ ಬಾಣಸವಾಡಿ ಮೂಲದ ನೇತ್ರಾವತಿ(31) ಸಾವನ್ನಪ್ಪಿದ್ದಾರೆ. ಕಾರ್ ಡಿಕ್ಕಿಯಾಗಿ ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೆಳಗೆ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನ ಎಡಭಾಗಕ್ಕೆ ಬಿದ್ದಿದ್ದರಿಂದ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ನೇತ್ರಾವತಿ ಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದರು. ಸೂಪರ್ವೈಸರ್ ಆಗಿದ್ದ ಪತಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ನೇತ್ರಾವತಿ ಕೂಡ ಖಾಸಗಿ ಟೀ ಶಾಪ್ ನಲ್ಲಿ ಸೂಪರ್ವೈಸರ್ ಆಗಿದ್ದರು. ಅಪಘಾತ ಎಸಗಿ ಪರಾರಿಯಾದ ಕಾರ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.