ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ನಟ ಆರ್ಜೆ ಮಿಟ್ಟೆ (RJ Mitte) ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜನಪ್ರಿಯ ಟಿವಿ ಸರಣಿಯಲ್ಲಿ ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅವರು, ಅಂಗವಿಕಲರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಮೂಲಕವೂ ಗುರುತಿಸಿಕೊಂಡಿದ್ದರು.
ಅಮೆರಿಕದ ಜನಪ್ರಿಯ ಟಿವಿ ಸರಣಿ ಬ್ರೇಕಿಂಗ್ ಬ್ಯಾಡ್ ಅಭಿಮಾನಿಗಳಿಗೆ ಆರ್‌ಜೆ ಮಿಟ್ಟೆ ಎಂದರೆ ವಾಲ್ಟರ್ ವೈಟ್ ಜೂನಿಯರ್ ಪಾತ್ರವೇ ನೆನಪಿಗೆ ಬರುತ್ತದೆ. ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಹಾಗೂ ಬೆಳಗಿನ ಉಪಾಹಾರದ ಮೇಲಿನ ಪ್ರೀತಿಯಿಂದ ಗಮನ ಸೆಳೆದಿದ್ದ ಅವರ ಪಾತ್ರವು ವೀಕ್ಷಕರ ಮನ ಗೆದ್ದಿತ್ತು. ತೆರೆಯ ಮೇಲಿನ ಅಭಿನಯದ ಜೊತೆಗೆ, ತೆರೆಯ ಹಿಂದೆಯೂ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುವ ಮೂಲಕ ಅವರು ಗಮನ ಸೆಳೆದಿದ್ದರು.
ಜನಪ್ರಿಯ ಸರಣಿಯ ಎಲ್ಲಾ ಐದು ಸೀಸನ್‌ಗಳಲ್ಲೂ ಕಾಣಿಸಿಕೊಂಡಿದ್ದ ನಟ ಆರ್ಜೆ ಮಿಟ್ಟೆ ಅವರು 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ಸೋಮವಾರ ಅವರು ಮೃತಪಟ್ಟಿದ್ದಾರೆ ಎಂದು ಟಿಎಂಜೆಡ್ (TMZ) ವರದಿ ಮಾಡಿದೆ.
ನಟನ ನಿಧನದ ಕುರಿತು ಅವರ ಪ್ರತಿನಿಧಿಗಳು ದಿ ಹಾಲಿವುಡ್ ರಿಪೋರ್ಟರ್ಗೆ ಹೇಳಿಕೆ ನೀಡಿದ್ದು, “ಪ್ರೀತಿಯ ನಟ, ಸಮಾಜಸೇವಕ ಹಾಗೂ ಅಂಗವಿಕಲರ ಹಕ್ಕುಗಳಿಗಾಗಿ ಉತ್ಸಾಹದಿಂದ ಹೋರಾಡುತ್ತಿದ್ದ ಆರ್‌ಜೆ ಮಿಟ್ಟೆ ಅವರ ದುರಂತ ನಿಧನವನ್ನು ಅತ್ಯಂತ ದುಃಖದಿಂದ ತಿಳಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಸಾವಿಗೆ ಕಾರಣವೇನು?
ಆರ್‌ಜೆ ಮಿಟ್ಟೆ ಅವರ ಸಾವಿಗೆ ನಿಖರ ಕಾರಣವನ್ನು ಅವರ ಪ್ರತಿನಿಧಿಗಳು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿಎಂಜೆಡ್ ವರದಿ ಮಾಡಿದ್ದು, ಸಾವಿನ ಸುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೂರು ವರ್ಷದ ವಯಸ್ಸಿನಲ್ಲೇ ಸೆರೆಬ್ರಲ್ ಪಾಲ್ಸಿ ಪತ್ತೆ
ಆರ್‌ಜೆ ಮಿಟ್ಟೆ ಅವರಿಗೆ ಮೂರು ವರ್ಷದವರಾಗಿದ್ದಾಗಲೇ ಸೆರೆಬ್ರಲ್ ಪಾಲ್ಸಿ (Cerebral Palsy) ಎಂಬ ನರಮಂಡಲಕ್ಕೆ ಸಂಬಂಧಿಸಿದ ಸ್ಥಿತಿ ಪತ್ತೆಯಾಗಿತ್ತು. ಈ ಸ್ಥಿತಿಯೊಂದಿಗೇ ಅವರು ಜೀವನ ನಡೆಸುತ್ತಿದ್ದರು. ಬ್ರೇಕಿಂಗ್ ಬ್ಯಾಡ್ ಸರಣಿಯಲ್ಲಿ ವಾಲ್ಟರ್ ವೈಟ್ ಜೂನಿಯರ್ ಪಾತ್ರ ನಿರ್ವಹಿಸುವಾಗಲೂ ಇದೇ ಸ್ಥಿತಿಯನ್ನು ಹೊಂದಿದ್ದರು. ಹೀಗಾಗಿ, ಅವರ ಅಭಿನಯವು ಅನೇಕ ವೀಕ್ಷಕರಿಗೆ ವಿಶೇಷ ಅರ್ಥವನ್ನು ನೀಡಿತ್ತು.
ನಟನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದ ಮಿಟ್ಟೆ, ಅಂಗವೈಕಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಿನಿಮಾ ಮತ್ತು ಮನರಂಜನಾ ಕ್ಷೇತ್ರದಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಮತ್ತು ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.
ಅವರು ಯುನೈಟೆಡ್ ಸೆರೆಬ್ರಲ್ ಪಾಲ್ಸಿ (United Cerebral Palsy) ಮತ್ತು ಶ್ರೈನರ್ಸ್ ಚಿಲ್ಡ್ರನ್ಸ್ (Shriners Children’s) ಸಂಸ್ಥೆಗಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಅಂಗವೈಕಲ್ಯ ಜಾಗೃತಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣದ ಉದ್ದೇಶ ಹೊಂದಿದ್ದ ಮಿಟ್ಟೆ ಫೌಂಡೇಶನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಐದು ವರ್ಷಗಳ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ
ವೈಯಕ್ತಿಕ ಜೀವನದಲ್ಲೂ ಆರ್‌ಜೆ ಮಿಟ್ಟೆ ಅವರು ಕೆನಡಿ ಸುವಾರೆಜ್ (Kennedy Suarez) ಅವರೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ಸಂಬಂಧವು 2020ರ ಸುಮಾರಿಗೆ ಪ್ರೀತಿಗೆ ತಿರುಗಿತ್ತು. ಸುಮಾರು ಐದು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
2025ರ ಅಕ್ಟೋಬರ್ 10ರಂದು ಕೆನಡಿ ಸುವಾರೆಜ್ ಅವರ 30ನೇ ಹುಟ್ಟುಹಬ್ಬದಂದು ಮಿಟ್ಟೆ ವಿವಾಹದ ಪ್ರಸ್ತಾಪ ಮಾಡಿದ್ದರು. ಸ್ಯಾನ್ ಡಿಯಾಗೋದಲ್ಲಿನ ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಸಂಸ್ಥೆಯ 56ನೇ ವಾರ್ಷಿಕ ‘ಡಿಯಾ ಡೆಲ್ ಸೋಲ್’ (Día del Sol) ನಿಧಿಸಂಗ್ರಹ ಸಮಾರಂಭದಲ್ಲಿ ಈ ವಿಶೇಷ ಕ್ಷಣ ನಡೆದಿತ್ತು.
ಕ್ಯಾಲಿಫೋರ್ನಿಯಾದ ಕಾರ್ಲ್ಸ್‌ಬ್ಯಾಡ್‌ನಲ್ಲಿರುವ ಪಾರ್ಕ್ ಹಯಾಟ್ ಅವಿಯಾರಾ ರೆಸಾರ್ಟ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆಯ ರಾಯಭಾರಿಯಾಗಿದ್ದ ಮಿಟ್ಟೆ, ಮೊಣಕಾಲೂರಿ ಕೆನಡಿ ಅವರಿಗೆ ವಿವಾಹದ ಪ್ರಸ್ತಾಪ ಮಾಡಿದ್ದರು ಎಂದು ವರದಿಯಾಗಿದೆ.

