ಹಾಸನ: ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಛಾಯಾಗ್ರಹಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂಡಿಗೆರೆ ತಾಲೂಕಿನ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿ, ಪ್ರಶಾಂತ್, ರಕ್ಷ್, ಅರವಿಂದ್, ಉಚಿತ್, ಪ್ರಜ್ವಲ್, ನಿಶಾಂತ್ ಬಂಧಿತ ಆರೋಪಿಗಳಾಗಿದ್ದಾರೆ. ಹಾಸನ ಮತ್ತು ಬೆಂಗಳೂರಿನ ಛಾಯಾಗ್ರಾಹಕರಾದ ನವಿ ಹಾಗೂ ನಂದನ್ ಅವರು ದೇವಾಲಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಆರೋಪಿತ ಭಕ್ತರ ನಡುವೆ ಮಾತಿನ ಚಕಮಕಿ ನಡೆದು ನಂತರ ಹೊಡೆದಾಟಕ್ಕೆ ತಿರುಗಿತ್ತು.
ಛಾಯಾಗ್ರಹಕರ ಮೇಲೆ ಹಲ್ಲೆ ನಡೆಸಿ ಅವರ ಕ್ಯಾಮರಾ ಪರಿಕರಗಳನ್ನು ಹಾಳು ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಪೊಲೀಸ್ ಠಾಣೆ ಎದುರಲ್ಲೇ ಛಾಯಾಗ್ರಾಹಕರು ಮತ್ತು ಆರೋಪಿಗಳ ಕಡೆಯವರ ನಡುವೆ ಮತ್ತೆ ಹೊಡೆದಾಟ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

