ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಡಾಲ್ಹೌಸಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪ್ರವಾಸಿ ಬಸ್ ಹಠಾತ್ತನೆ ಚಾಲಕನ ನಿಯಂತ್ರಣವಿಲ್ಲದೆ ಪ್ರಪಾತದ ಕಡೆಗೆ ಉರುಳಲು ಆರಂಭಿಸಿದಾಗ, ಬಸ್ಸಿನಲ್ಲಿದ್ದ ಪ್ರವಾಸಿಗರು ಪ್ರಾಣ ಭಯದಿಂದ ಕಿಟಕಿಯಿಂದ ಹಾರಿ ಬದುಕುಳಿದಿದ್ದಾರೆ.
ಘಟನೆ ವಿವರ
ಪ್ರವಾಸಿಗರಿಂದ ತುಂಬಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಬಸ್ಸಿನಿಂದ ಕೆಲವು ಪ್ರವಾಸಿಗರು ಕೆಳಗಿಳಿಯುತ್ತಿದ್ದಾಗಲೇ ಬಸ್ ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಲು ಆರಂಭಿಸಿದೆ. ಬಸ್ ವೇಗವಾಗಿ ಬೆಟ್ಟದ ಅಂಚಿಗೆ ಅಂದರೆ ಪ್ರಪಾತದ ಕಡೆಗೆ ಸರಿಯುವುದನ್ನು ಕಂಡ ಒಳಗಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ 51 ಸೆಕೆಂಡ್ಗಳ ಈ ಭಯಾನಕ ದೃಶ್ಯದಲ್ಲಿ, ಮಹಿಳಾ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಬಸ್ಸಿನ ಕಿಟಕಿಗಳಿಂದ ಹೊರಕ್ಕೆ ಜಿಗಿಯುತ್ತಿರುವುದು ಕಂಡುಬಂದಿದೆ.
ಬಸ್ ಉರುಳುತ್ತಿದ್ದಾಗ ಒಟ್ಟು ಏಳು ಪ್ರವಾಸಿಗರು ಕಿಟಕಿಯಿಂದ ಹೊರಕ್ಕೆ ಹಾರಿದ್ದಾರೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಪಾತಕ್ಕೆ ಬೀಳುವ ಮುನ್ನವೇ ಬಸ್ ಪಕ್ಕದಲ್ಲಿದ್ದ ಮರವೊಂದಕ್ಕೆ ಸಿಲುಕಿಕೊಂಡಿದೆ. ಇದರಿಂದಾಗಿ ಬಸ್ ನಿಂತಿದ್ದು, ಒಳಗಿದ್ದ ಉಳಿದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

