ಹಾಸನ: 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆ ಮೂಲಕ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ಆಹಾರ ನೀಡಬೇಕು, ವಿಳಂಬವಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಸೂಚನೆ ನೀಡಿದರು.
ವಿಡಿಯೋ ಸಂವಾದದ ಮೂಲಕ ಇಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಫೆ 13 ರಂದು ಜಿಲ್ಲೆಗೆ ಭೇಟಿ ನೀಡಿ ಸಭೆಯಲ್ಲಿ ನೀಡಿದ ನಿರ್ದೇಶನದ ಕುರಿತು ಕೈಗೊಂಡ ಕ್ರಮದ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸಚಿವರ ನಿರ್ದೇಶನದಂತೆ ಈಗಾಗಲೇ ಬಿಪಿಎಲ್ನಿಂದ ಎಪಿಎಲ್ಗೆ ಪರಿವರ್ತಿಸಿದ್ದರೆ ಅಗತ್ಯ ದಾಖಲೆಗಳನ್ನು ಪಡೆದು ಬಿಪಿಎಲ್ ಕಾರ್ಡ್ ನೀಡಲು ಮರು ಪರಿಶೀಲನೆ ಮಾಡುವಂತೆ ತಿಳಿಸಿದರು.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ವೇಳೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದ ಸಂಘ ಸಂಸ್ಥೆಗಳಿಗೆ/ಸಮುದಾಯದ ಖಾಸಗಿ ವ್ಯಕ್ತಿಗಳಿಗೆ ಮೀಸಲಾತಿಯನ್ನು ಅನುಸರಿಸಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕ್ರಮ ವಹಿಸುವಂತೆ ಸೂಚಿಸಿದರು
ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ವೇಳಾಪಟ್ಟಿಯನ್ನು ಅಳವಡಿಸಿರಬೇಕು. ವೇಳಾಪಟ್ಟಿ ಅಳವಡಿಸದಿರುವ ನ್ಯಾಯ ಬೆಲೆಗಳ ವಿವರವನ್ನು ಕೂಡಲೇ ಸಲ್ಲಿಸುವಂತೆ ತಿಳಿಸಿದರು.
ತೂಕ ಅಳತೆಯ ಪರಿಶೀಲನೆಯಾಗಬೇಕು. ನಿಗದಿತ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು ಹಾಗೂ ಇತರೆ ವ್ಯವಸ್ಥೆಗಳು ಇರಬೇಕು, ಇಲ್ಲದಿದ್ದಲ್ಲಿ ಪರವಾನಿಗೆ ರದ್ದು ಪಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಡಿಯೋ ಸಂವಾದದಲ್ಲಿ ಆಹಾರ ನಾಗರಿಕ ಇಲಾಖೆ ಉಪ ನಿರ್ದೇಶಕರಾದ ಅರುಣ್ ಕುಮಾರ್ ಮತ್ತಿತರರು ಬಾಗವಹಿಸಿದ್ದರು.

