ಬೆಂಗಳೂರು: ಪ್ರಯಾಣಿಕರು ಕ್ಯಾಬ್ ನಲ್ಲಿ ಬ್ಯಾಗ್, ಲಗೇಜ್ ಗಳನ್ನು ಮರೆತು ಬಿಟ್ಟು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ದಂಪತಿ ಹೆತ್ತ ಮಗುವನ್ನೇ ಮರೆತು ಕ್ಯಾಬ್ ನಲ್ಲಿ ಬಿಟ್ಟು ಇಳಿದು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿದ್ದೆಗೆ ಜಾರಿದ್ದ ಮಗುವನ್ನು ಮರೆತು ಕ್ಯಾಬ್ನಲ್ಲಿಯೇ ಪೋಷಕರು ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ಹೆಣ್ಣೂರಲ್ಲಿ ಈ ಘಟನೆ ನಡೆದಿದೆ. ೪ ವರ್ಷದ ಜಿಯಾನ್ ಚುಂಗಿ ಎಂಬ ಬಾಲಕನನ್ನು ಪೋಷಕರು ಕ್ಯಾಬ್ ನಲ್ಲಿಯೇ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದ ಬಳಿಕ ಮಗು ಕ್ಯಾಬ್ ನಲ್ಲಿಯೇ ಇದೆ ಎಂಬುದು ನೆನಪಿಗೆ ಬಂದಿದೆ.
ಜಿಯಾನ್ ಕುಟುಂಬ ಮತ್ತು ಬಂಧುಗಳು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದಿಂದ ಮರಳಿ ಬರುವ ವೇಳೆ ಜಿಯಾನ್ ಕ್ಯಾಬ್ನ ಹಿಂಬದಿಯ ಆಸನದಲ್ಲಿ ನಿದ್ದೆಗೆ ಜಾರಿದ್ದ. ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ ಬಳಿಕ ಕುಟುಂಬಸ್ಥರು ಗಡಿಬಿಡಿಯಿಂದ ಕ್ಯಾಬ್ ಇಳಿದು ಮನೆಗೆ ತೆರಳಿದ್ದಾರೆ. ನಿದ್ದೆ ಮಾಡುತ್ತಿದ್ದ ಬಾಲಕ ಜಿಯಾನ್ ಬಗ್ಗೆ ಒಬ್ಬರಿಗೂ ಗಮನ ಇರಲಿಲ್ಲ.
ಕ್ಯಾಬ್ ಚಾಲಕನಿಗೂ ಬಾಲಕ ಹಿಂಬದಿ ನಿದ್ದೆಯಲ್ಲಿದ್ದಾನೆ ಎಂಬುದನ್ನು ಗಮನಿಸದೇ ಮುಂದಿನ ಟ್ರಿಪ್ಗೆಂದು ತೆರಳಿದ್ದ. ಕುಟುಂಬದವರು ಮನೆ ತಲುಪುತ್ತಿದ್ದಂತೆ ಮಗು ಕಾಣಿಸುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ. ಈ ವೇಳೆ ಆತ ಕ್ಯಾಬ್ನಲ್ಲಿ ನಿದ್ರಿಸುತ್ತಿದ್ದ ಎಂಬುದು ನೆನಪಾಗಿ ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ವಿಫಲವಾದ ಕಾರಣ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ಗೆ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿ ತಕ್ಷಣವೇ ಹೋಯ್ಸಳ-51 ಪೇಟ್ರೋಲಿಂಗ್‌ನಲ್ಲಿ ಸಮೀಪದಲ್ಲಿದ್ದ ಎಎಸ್‌ಐ ಮಂಜಪ್ಪ ಕೊಪ್ಪಳ ಹಾಗೂ ಮುಖ್ಯ ಆರಕ್ಷಕ ಸತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಎರಡು ನಿಮಿಷಗಳಲ್ಲೇ ಅಪಾರ್ಟ್‌ಮೆಂಟ್ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (CCTNS) ಆಪ್ ಬಳಸಿ ಚಾಲಕನನ್ನು ಸಂಪರ್ಕಿಸಿದ್ದಾರೆ.
ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಕ್ಯಾಬ್ ಚಾಲಕನಿಗೆ ನಿರ್ದೇಶಿಸಲಾಗಿದೆ.
ಬಾಲಕನ ಹುಡುಕಾಟ ಆರಂಭವಾದ ಒಂದು ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

