ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗ ಕಡಿತದ ಘೋಷಣೆ ಮಾಡುತ್ತಿವೆ. ಈಗ ಮೆಟಾ ಸಂಸ್ಥೆಯಲ್ಲಿ ನೂರಾರು ಉದ್ಯೋಗಿಗಳ ವಜಾಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ವರದಿಯೊಂದು ಹೇಳಿದೆ. AI) ಕಡೆಗೆ ಕಂಪನಿಯ ಚಿತ್ತಹರಿಸಿದೆ.
ತನ್ನ ವ್ಯವಹಾರ ವಿಭಾಗಗಳಲ್ಲಿ ಮೆಟಾ ಸಂಸ್ಥೆಯು ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈ ಉದ್ಯೋಗ ಕಡಿತ ಮಾಡಲಾಗುತ್ತಿದೆ.
ಈ ಹೊಸ ಹಂತದ ಉದ್ಯೋಗ ಕಡಿತವು ನೇಮಕಾತಿ, ಸೋಶಿಯಲ್ ಮೀಡಿಯಾ, ಮಾರಾಟ ಮತ್ತು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಹಾಗೂ ಸ್ಮಾರ್ಟ್ ಗ್ಲಾಸ್‌ಗಳ ಮೇಲೆ ಕೆಲಸ ಮಾಡುವ ರಿಯಾಲಿಟಿ ಲ್ಯಾಬ್ಸ್ ವಿಭಾಗಗಳ ಮೇಲೆ ಪರಿಣಾಮ ಬೀರಬಹುದು.
ಎಷ್ಟು ಜನರನ್ನು ಕೆಲಸದಿಂದ ತೆಗೆಯಲಾಗಿದೆ? ಅಥವ ತೆಗೆಯಲಾಗುತ್ತದೆ? ಎಂಬ ನಿಖರ ಸಂಖ್ಯೆಯನ್ನು ಕಂಪನಿ ಹಂಚಿಕೊಂಡಿಲ್ಲ. ಡಿಸೆಂಬರ್ 2025ರ ಅಂಕಿಅಂಶದಂತೆ, ಮೆಟಾ ಜಾಗತಿಕವಾಗಿ ಸುಮಾರು 79,000 ಉದ್ಯೋಗಿಗಳನ್ನು ಹೊಂದಿತ್ತು.
ಕಂಪನಿಯ ಸ್ಪಷ್ಟನೆ: ಈ ಬೆಳವಣಿಗೆ ಕುರಿತು ಅಧಿಕೃತವಾಗಿ ಹೇಳಿಕೆಯನ್ನು ನೀಡಲಾಗಿದೆ. ಇದು ಕಂಪನಿಯ ಒಳಗೆ ನಡೆಯುತ್ತಿರುವ ಬದಲಾವಣೆಗಳ ಭಾಗವಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ. ಗುರಿಗಳನ್ನು ತಲುಪಲು ತಂಡಗಳನ್ನು ನಿಯಮಿತವಾಗಿ ಪುನರ್ರಚನೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ಸಂಸ್ಥೆಯ ಒಳಗೇ ಇತರ ಹುದ್ದೆಗಳನ್ನು ನೀಡಲು ಪ್ರಯತ್ನಿಸುತ್ತಿರುವುದಾಗಿ ಕಂಪನಿ ಹೇಳಿದೆ.
ಮೆಟಾ ಕಂಪನಿಯು ತನ್ನ ಹಿಂದಿನ ಆದ್ಯತೆಯಾಗಿದ್ದ ‘ಮೆಟಾವರ್ಸ್’ನಿಂದ ದೂರ ಸರಿಯುತ್ತಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಕಂಪನಿಯು AI ತಂತ್ರಜ್ಞಾನದ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದೆ.
ಬೃಹತ್ ಡೇಟಾ ಸೆಂಟರ್‌ಗಳು, ಹೊಸ ಹಾರ್ಡ್‌ವೇರ್ ಮತ್ತು ಸುಧಾರಿತ ಚಿಪ್‌ಗಳ ತಯಾರಿಕೆ ಸೇರಿದಂತೆ AI ಮೂಲಸೌಕರ್ಯಗಳ ಮೇಲೆ ಮೆಟಾ ಭಾರಿ ಹೂಡಿಕೆ ಮಾಡುವ ನಿರೀಕ್ಷೆಯಿದೆ.
ಒಂದು ಕಾಲದಲ್ಲಿ ಮೆಟಾದ ಭವಿಷ್ಯದ ದೃಷ್ಟಿಕೋನಕ್ಕೆ ಪ್ರಮುಖವಾಗಿದ್ದ ‘ರಿಯಾಲಿಟಿ ಲ್ಯಾಬ್ಸ್’ ತೀವ್ರ ಸಂಕಷ್ಟಕ್ಕೀಡಾಗಿದೆ. ಈ ವರ್ಷದ ಆರಂಭದಲ್ಲಿ ಈ ವಿಭಾಗದಲ್ಲಿ ಕನಿಷ್ಠ 1,000 ಉದ್ಯೋಗಗಳನ್ನು ಕಡಿತಗೊಳಿಸಲಾಗಿತ್ತು ಮತ್ತು ಮೂರು ವರ್ಚುವಲ್ ರಿಯಾಲಿಟಿ ಸ್ಟುಡಿಯೋಗಳನ್ನು ಮುಚ್ಚಲಾಗಿತ್ತು.
ಮೆಟಾವರ್ಸ್ ಆಧಾರಿತ ಕೆಲಸದ ವೇದಿಕೆಗಳನ್ನು ಮತ್ತು ‘ಸೂಪರ್ ನ್ಯಾಚುರಲ್’ ಎಂಬ ವಿಆರ್ ಫಿಟ್‌ನೆಸ್ ಆ್ಯಪ್‌ನ ಹೊಸ ಕಂಟೆಂಟ್ ಉತ್ಪಾದನೆಯನ್ನು ಕಂಪನಿ ನಿಲ್ಲಿಸಿದೆ.

