HomeKarnatakaBREAKING: ಪಾಕಿಸ್ತಾನದ ಸರ್ಕಾರಿ ಕಚೇರಿ, ಕೋರ್ಟ್ ಗಳಿಗೂ ಬಾಂಬ್ ಬೆದರಿಕೆ ಹಾಕಿದ್ದ ಮೈಸೂರಿನ ಹುಸಿ ಬಾಂಬ್...

BREAKING: ಪಾಕಿಸ್ತಾನದ ಸರ್ಕಾರಿ ಕಚೇರಿ, ಕೋರ್ಟ್ ಗಳಿಗೂ ಬಾಂಬ್ ಬೆದರಿಕೆ ಹಾಕಿದ್ದ ಮೈಸೂರಿನ ಹುಸಿ ಬಾಂಬ್ ಬೆದರಿಕೆ ಆರೋಪಿ

ಮೈಸೂರು: ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಬಂಧಿತನಾಗಿರುವ ಹುಸಿ ಬಾಂಬ್ ಬೆದರಿಕೆ ಆರೋಪಿ ಶ್ರೀನಿವಾಸ್ ಲೂಯಿಸ್, ಪಾಕಿಸ್ತಾನದ ಸರ್ಕಾರಿ ಕಚೇರಿ ಮತ್ತು ಕೋರ್ಟ್‌ಗಳಿಗೂ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿರುವುದು ದೆಹಲಿ ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.

ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಮೈಸೂರಿನ ಶ್ರೀನಿವಾಸ್ ಲೂಯಿಸ್ (47), ಅಂತರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕೆಲಸ ಮಾಡಿರುವುದು ದೆಹಲಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಈತ ಪಾಕಿಸ್ತಾನದ ನ್ಯಾಯಾಲಯಗಳು, ಶಾಲಾ-ಕಾಲೇಜುಗಳು ಮತ್ತು ಅಲ್ಲಿನ ಸರ್ಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಎಂದು ತಿಳಿದುಬಂದಿದೆ.

ತಾಂತ್ರಿಕವಾಗಿ ಬುದ್ಧಿವಂತನಾಅಗಿರುವ ಶ್ರೀನಿವಾಸ್, ಪೊಲೀಸರಿಗೆ ಸಿಕ್ಕಿಬೀಳದಂತೆ ತನ್ನ ಐಪಿ ವಿಳಾಸವನ್ನು ಮರೆಮಾಚಲು ‘ಡಾರ್ಕ್ ವೆಬ್’ ಮತ್ತು ವಿಪಿಎನ್ ತಂತ್ರಜ್ಞಾನ ಬಳಸುತ್ತಿದ್ದ. ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಪತ್ತೆ ಹಚ್ಚಲು ಗೂಗಲ್ ಮ್ಯಾಪ್ ಬಳಸುತ್ತಿದ್ದ ಈತ, ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕವೂ ಕರೆಗಳನ್ನು ಮಾಡುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸಿ ಈ ಕೃತ್ಯ ಎಸಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 27ರಂದು ಮೈಸೂರಿನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತನಿಂದ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೋಧಿಸಲು ಪೊಲೀಸರು ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇಮೇಲ್ ಕಳುಹಿಸುತ್ತಿದ್ದ ಈತ, ದೇಶದ ಹಲವು ರಾಜ್ಯಗಳ ವಿಧಾನಸಭೆಗಳಿಗೂ ಬೆದರಿಕೆ ಹಾಕಿದ್ದ.

ಸದ್ಯ ದೆಹಲಿ ಪೊಲೀಸರ ಕಸ್ಟಡಿಯಲ್ಲಿರುವ ಶ್ರೀನಿವಾಸ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತನ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಅಥವಾ ಕೇವಲ ಕಿಡಿಗೇಡಿತನದಿಂದ ಇಷ್ಟೆಲ್ಲಾ ಮಾಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular