ಬಾಲಿವುಡ್‌ನಲ್ಲಿ ಸೌಂದರ್ಯ ಮತ್ತು ಫಿಟ್‌ನೆಸ್ ಕುರಿತಾದ ಕಲ್ಪನೆಗಳು ಕಾಲಕ್ರಮೇಣ ಸಾಕಷ್ಟು ಬದಲಾವಣೆ ಕಂಡಿವೆ. 2000ರ ದಶಕಾರಂಭದಲ್ಲಿ ನಟಿಯರು ಅತಿಯಾದ ಸಣ್ಣ ದೇಹದ ಸೌಂದರ್ಯಕ್ಕೆ ಆದ್ಯತೆ ನೀಡುತ್ತಿದ್ದ ಸಮಯದಲ್ಲಿ, ಕ್ರೀಡಾಪಟುವಿನಂತ ದೃಢ ಕಾಯ ಮತ್ತು ಫಿಟ್‌ನೆಸ್ ಮೂಲಕ ಗಮನ ಸೆಳೆದವರು ನಟಿ ಬಿಪಾಶಾ ಬಸು. ಚಿತ್ರರಂಗದಲ್ಲಿದ್ದ ಸಾಂಪ್ರದಾಯಿಕ ಸೌಂದರ್ಯದ ಚೌಕಟ್ಟುಗಳನ್ನು ಮುರಿದು ತಮ್ಮದೇ ಆದ ಹೊಸ ಹಾದಿ ನಿರ್ಮಿಸಿದ ಕುರಿತು ಬಿಪಾಶಾ ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಫಿಟ್‌ನೆಸ್ ಪಯಣವನ್ನು ನೆನಪಿಸಿಕೊಂಡ ನಟಿ, ಬಾಲಿವುಡ್‌ನಲ್ಲಿ ದೃಢಕಾಯ ಹೊಂದಿರುವ ಮಹಿಳೆಯರನ್ನು ಸುಲಭವಾಗಿ ಒಪ್ಪಿಕೊಳ್ಳದ ಕಾಲದಲ್ಲಿ ತಾವು ಆ ಹೊಸ ಅಲೆಗೆ ನಾಂದಿ ಹಾಡಿದ್ದಾಗಿ ತಿಳಿಸಿದ್ದಾರೆ. ಆರಂಭದ ದಿನಗಳಲ್ಲಿ ನಟಿಯರು ಕೇವಲ ಬಿಳುಪು ಮತ್ತು ಸಣ್ಣ ದೇಹದ ಸೌಂದರ್ಯಕ್ಕೆ ಸೀಮಿತವಾಗಿದ್ದರು. ಆದರೆ ಎತ್ತರದ ನಿಲುವು, ಮಾಟವಾದ ಮೈಕಟ್ಟು ಮತ್ತು ಕಂದು ಮೈಬಣ್ಣ ಹೊಂದಿದ್ದ ತಮ್ಮ ಶೈಲಿಯೇ ಪ್ರತ್ಯೇಕವಾಗಿ ಎದ್ದು ಕಾಣುತ್ತಿತ್ತು ಎಂದು ಅವರು ವಿವರಿಸಿದ್ದಾರೆ. ದೇಹದ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲಿನ ಪ್ರೀತಿ ಮುಖ್ಯ ಎಂಬ ಜಾಗೃತಿ ಮೂಡಿಸಲು ಶ್ರಮಿಸಿರುವುದಾಗಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಕೂಡ ಬಿಪಾಶಾ ಬಸು ಅವರ ದೈಹಿಕ ಫಿಟ್‌ನೆಸ್ ಮತ್ತು ದೃಢ ಶರೀರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಮಹಿಳೆಯರ ದೇಹದಲ್ಲಿನ ಮಾಂಸಖಂಡಗಳು ಅವರ ಸೌಂದರ್ಯವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ ಅದು ಅವರ ಶಕ್ತಿಯ ಸಂಕೇತ ಎಂದು ಮಸಾಬಾ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ಹಳೆಯ ವಿಡಿಯೋ ಒಂದರ ವಿವಾದವೂ ಮುನ್ನೆಲೆಗೆ ಬಂದಿದೆ. ನಟಿ ಮೃಣಾಲ್ ಠಾಕೂರ್ ಅವರ ಹಳೆಯ ಸಂದರ್ಶನದ ತುಣುಕೊಂದು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಬಿಪಾಶಾ ಅವರ ದೇಹದಾರ್ಢ್ಯದ ಕುರಿತು ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಮೃಣಾಲ್ ಠಾಕೂರ್ ತಮ್ಮ ಹಳೆಯ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

