ಬೆಂಗಳೂರು : ಬಿಎಂಟಿಸಿ ಬಸ್ಗಳು ಇಲ್ಲಿಯವರೆಗೆ ಎಲ್ಲ ತಂಗುದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿದ್ದವು. ದೂರ ಪ್ರಯಾಣದ ಬಸ್ಗಳು ಇನ್ನು ಮುಂದೆ ಸೀಮಿತ ನಿಲುಗಡೆ ವ್ಯವಸ್ಥೆಯಲ್ಲಿ ಸಂಚರಿಸಲಿವೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಚಂದಾಪುರದಿಂದ ವೈಟ್ಫೀಲ್ಡ್ಗೆ ಬಿಎಂಟಿಸಿ ಬಸ್ ತೆರಳಲು ಕನಿಷ್ಟ 2 ತಾಸು ಬೇಕಾಗುತ್ತದೆ. ಇದೇ ರೀತಿ ಹೆಚ್ಚು ದೂರ ಕ್ರಮಿಸಬೇಕಾದ ಹಲವು ಪ್ರದೇಶಗಳಿವೆ. ಹತ್ತು ಕಡೆ ನಿಲ್ಲಿಸುವ ಬದಲು ಎರಡು ಕಡೆ ನಿಲುಗಡೆಯಂತೆ ಸೀಮಿತಗೊಳಿಸುತ್ತಾ ಹೋದರೆ ಕನಿಷ್ಠ ಅರ್ಧ ಗಂಟೆ ಬೇಗ ತಲುಪಲು ಸಾಧ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ನಗರ ಸಾರಿಗೆಯಲ್ಲಿಯೂ ಸೀಮಿತ ನಿಲುಗಡೆಯ ಬಸ್ಗಳು ಅಗತ್ಯವಾಗಿರುವುದರಿಂದ ಅವುಗಳನ್ನು ಪರಿಚಯಿಸಲಾಗುತ್ತಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವೇಗದೂತ ಬಸ್ಗಳು ಸಂಚರಿಸುವ ಮಾರ್ಗಗಳಲ್ಲಿ ಎಲ್ಲ ಕಡೆ ನಿಲುಗಡೆ ಇರುವ ಸಾಮಾನ್ಯ ಬಸ್ಗಳು ಎಂದಿನಂತೆ ಇರಲಿವೆ. ಪ್ರಮುಖ ಕಾರಿಡಾರ್ಗಳಲ್ಲಿ ದೂರ ಪ್ರಯಾಣ ಮಾಡುವವರಿಗೆ ಸೀಮಿತ ನಿಲುಗಡೆಯ ವೇಗದೂತ ಬಸ್ಗಳು ಅನುಕೂಲವಾಗಲಿವೆ. ಆರಂಭದಿಂದ ಕೊನೇ ತುದಿಯವರೆಗೆ ಸಂಚರಿಸುವ ಈ ಬಸ್ಗಳು ಬೆರಳೆಣಿಕೆಯ ನಿಲುಗಡೆಗಳನ್ನಷ್ಟೇ ಹೊಂದಿರುತ್ತವೆ. ಪ್ರಯಾಣದ ಸಮಯ ಕಡಿಮೆಯಾಗುವುದರಿಂದ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

