ಬೆಂಗಳೂರು: ಸಿಲಿಕಾನ್ ಸಿಟಿಯ ಬಿಎಂಟಿಸಿ (BMTC) ಬಸ್‌ಗಳಲ್ಲಿ ಜೇಬುಗಳ್ಳತನ, ಮೊಬೈಲ್ ಕಳ್ಳತನ ಅಥವಾ ಟಿಕೆಟ್ ಇಲ್ಲದೆ ಪ್ರಯಾಣಿಸುವ ಕಿಲಾಡಿಗಳನ್ನು ನೀವು ನೋಡಿರಬಹುದು. ಆದರೆ, ಬೆಂಗಳೂರಿನಲ್ಲಿ ಕಂಡಕ್ಟರ್ ಕಲೆಕ್ಷನ್ ದುಡ್ಡಿನ ಚೀಲಕ್ಕೇ ಕೈಹಾಕಿದ ಮಹಿಳೆಯೊಬ್ಬಳ ಹೈ-ಡ್ರಾಮಾ ಈಗ ಬೆಳಕಿಗೆ ಬಂದಿದೆ ನಿರ್ವಾಹಕನ ಟಿಕೆಟ್ ಬ್ಯಾಗ್ ಕದ್ದು ಎಸ್ಕೇಪ್ ಆಗಲು ಯತ್ನಿಸಿದ ಚಾಲಾಕಿ ಕಳ್ಳಿಗೆ ಬಸ್ ಚಾಲಕ ತನ್ನ ಸಮಯಪ್ರಜ್ಞೆಯಿಂದ ಸರಿಯಾದ ಶಾಸ್ತಿ ಮಾಡಿದ್ದಾನೆ. ಪೊಲೀಸರು ಬರುವವರೆಗೂ ಬಾಗಿಲು ತೆರೆಯದೆ ಲಾಕ್ ಮಾಡಿ, ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಒಪ್ಪಿಸಲಾಗಿದೆ. ಸದ್ಯ ಬಸ್ ಒಳಗಡೆ ನಡೆದ ಈ ಹೈವೋಲ್ಟೇಜ್ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸುತ್ತಿದೆ.
ಬಸ್ ಸೈಡ್‌ಗೆ ಹಾಕಿದ ಡ್ರೈವರ್: ವೈರಲ್ ವಿಡಿಯೋದಲ್ಲಿ ಏನಿದೆ?
ಸಹ ಪ್ರಯಾಣಿಕರಂತೆ ಬಸ್ ಹತ್ತಿದ ಈ ಮಧ್ಯವಯಸ್ಕ ಮಹಿಳೆ, ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಕಲೆಕ್ಷನ್ ಹಣದ ಮೇಲೆ ಕಣ್ಣಿಟ್ಟು ಅದನ್ನು ಎಗರಿಸಿದ್ದಾಳೆ. ಕಳ್ಳತನದ ಸುಳಿವು ಸಿಗುತ್ತಿದ್ದಂತೆ ಬಸ್ ಸಿಬ್ಬಂದಿ ಜಾಗೃತರಾಗಿದ್ದಾರೆ:
ಡ್ರೈವರ್ ಸಮಯಪ್ರಜ್ಞೆ: ಕಳ್ಳತನ ಬಯಲಾಗುತ್ತಿದ್ದಂತೆ ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಪೊಲೀಸರು ಬರುವವರೆಗೂ ಬಾಗಿಲು ತೆರೆಯದೇ ಇತರ ಪ್ರಯಾಣಿಕರನ್ನು ಮಾತ್ರ ಕೆಳಗಿಳಿಸಿದ್ದಾರೆ.
ಆವಾಜ್ ಹಾಕಿದ ಮಹಿಳೆ: ಆರಂಭದಲ್ಲಿ ಬಾಗಿಲು ತೆರೆಯುವಂತೆ ಸಿಬ್ಬಂದಿಗೆ ಆವಾಜ್ ಹಾಕಿದ ಮಹಿಳೆ, ಮಹಿಳಾ ಪೊಲೀಸ್ ಒಳ ಬರುತ್ತಿದ್ದಂತೆ ತಣ್ಣಗಾಗಿದ್ದಾಳೆ.
ವರಸೆ ಬದಲಿಸಿದ ಕಳ್ಳಿ: ತನ್ನ ಕೈಯಲ್ಲಿದ್ದ ಚೀಲದಿಂದ ಕದ್ದ ಟಿಕೆಟ್ ಬ್ಯಾಗ್ ಹೊರತೆಗೆಯುತ್ತಲೇ, “ಇದು ನನ್ನದಲ್ಲ” ಎಂದು ಮುಗ್ಧೆಯಂತೆ ನಾಟಕವಾಡಲು ಶುರುಮಾಡಿದ್ದಾಳೆ. ಕೊನೆಗೆ “ಮನೆಯಲ್ಲಿ ಮಕ್ಕಳಿದ್ದಾರೆ, ನನ್ನನ್ನು ಬಿಟ್ಟುಬಿಡಿ” ಎಂದು ಪೊಲೀಸರ ಮುಂದೆ ಗೋಗರೆದಿದ್ದಾಳೆ.
ಮಹಿಳೆಯ ಈ ಘನಂದಾರಿ ಕೆಲಸಕ್ಕೆ ಬಸ್ ಸಿಬ್ಬಂದಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಬಾಗಿಲು ತೆರೆಯಬೇಡಿ, ಇವಳನ್ನು ಠಾಣೆಗೆ ಕರೆದೊಯ್ಯೋಣ. ಇವಳು ಮಾಡಿದ ಕೆಲಸಕ್ಕೆ ನಮ್ಮ ಕೆಲಸ ಊಡುಗಟ್ಟುತ್ತಿತ್ತು. ನಿನ್ನ ಮುಖವಾಡ ಕಳಚಲು ಬಸ್‌ನಲ್ಲಿದ್ದ ಸಹ ಮಹಿಳಾ ಪ್ರಯಾಣಿಕರೇ ಸಾಕ್ಷಿ ನುಡಿದಿದ್ದಾರೆ. ನಿನ್ನಿಂದಾಗಿ ಮಕ್ಕಳು-ಮರಿ ಇರುವ ನಾವೇಕೆ ಕೆಲಸ ಕಳೆದುಕೊಳ್ಳಬೇಕು? ಎಂದು ಕಂಡಕ್ಟರ್ ಆ ತಾಯಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು?
ಈ ಕಳ್ಳತನದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬ್ಯಾಗ್ ಕದ್ದ ಮಹಿಳೆಯ ವಿರುದ್ಧ ತೀವ್ರ ಛೀಮಾರಿ ಹಾಕುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಸಾರ್ವಜನಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹೀಗಿವೆ:
ಕಂಡಕ್ಟರ್ ಹೊಟ್ಟೆ ಮೇಲೆ ಹೊಡೆಯಬೇಡಿ: ಡ್ಯೂಟಿ ಕಂಡಕ್ಟರ್ ಹೊಟ್ಟೆ ಮೇಲ್ಯಾಕೆ ಹೊಡಿತೀರಾ ಬಸ್ ಸಿಬ್ಬಂದಿಗೆ ಮೊದಲೇ ಕಮ್ಮಿ ಸಂಬಳ, ಅವರ ಗತಿ ಕೇಳೋರಿಲ್ಲ. ಇಂತಹ ಕಳ್ಳತನದಿಂದ ಅವರು ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನೌಕರರ ಪರ ನಿಂತಿದ್ದಾರೆ.
ನಾಟಕವಾಡೋ ಕಳ್ಳರು: ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದಾಗ ತಾವೇ ಸಂತ್ರಸ್ತೆಯಂತೆ ಬಿಂಬಿಸುವ ಇಂತಹವರ ಹಿನ್ನೆಲೆ ಪರಿಶೀಲಿಸಿ ಪೊಲೀಸರು ತಕ್ಕ ಶಾಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಹಾಳಾಗುತ್ತಿದೆ: ಬೇರೆ ರಾಜ್ಯದಿಂದ ಬಂದು ಇಲ್ಲಿ ಇಂತಹ ಕೃತ್ಯ ಎಸಗುವವರಿಂದಲೇ ನಮ್ಮ ಸುಂದರ ಬೆಂಗಳೂರು ಹಾಳಾಗುತ್ತಿದೆ. ಇಂತವರನ್ನು ಅವರವರ ರಾಜ್ಯಕ್ಕೆ ವಾಪಸ್ ಕಳುಹಿಸಬೇಕು ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಬಿಎಂಟಿಸಿ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅವಘಡವೊಂದು ತಪ್ಪಿದಂತಾಗಿದ್ದು, ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

