ಬೆಂಗಳೂರು: ಒಳ ಮೀಸಲಾತಿ ಅಡಿ ಜಾತಿ ಪ್ರಮಾಣ ಪತ್ರ ನೀಡಿಕೆ ಸರಳೀಕರಣಗೊಳಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಶಿವಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಪರವಾಗಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಒಳ ಮೀಸಲಾತಿ ಹೊಸ ವರ್ಗೀಕರಣದ ಅಡಿ ಅರ್ಹ ಉಪಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಿಕೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪರಿಶಿಷ್ಟ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಿಕೆಯಲ್ಲಿ ಅನಗತ್ಯ ಪುರಾವೆ ಕೇಳುವ ಮತ್ತು ವಿಳಂಬ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಜಾತಿ, ಮರಣ, ಜನನ ಪ್ರಮಾಣ ಪತ್ರ ನೀಡಿಕೆಯಲ್ಲಿ ತಪ್ಪಾಗದಿರಲು ಮಹಾರಾಷ್ಟ್ರ ಮಾದರಿಯಲ್ಲಿ ಬ್ಲಾಕ್ ಚೈನ್ ವ್ಯವಸ್ಥೆ ಅಳವಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಜಾತಿ ಪ್ರಮಾಣ ಪತ್ರ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸುವ ಬಗ್ಗೆ ಪರಿಶೀಲಿಸುವುದಾಗಿಯೂ ಸಚಿವರು ಹೇಳಿದ್ದಾರೆ.

