ನವದೆಹಲಿ: ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಶಂಕಿತ ಸ್ಫೋಟ ಸಂಭವಿಸಿದೆ. ಭದ್ರತಾ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
ಕಚೇರಿಯ ಹೊರಗೆ ಕಡಿಮೆ ತೀವ್ರತೆಯ ಕಚ್ಚಾ ಸ್ಫೋಟಕ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂಜೆ 5 ಗಂಟೆ ಸುಮಾರಿಗೆ ಶಬ್ದಗಳು ಕೇಳಿಬಂದವು ಎಂದು ರಾಜ್ಯ ಬಿಜೆಪಿ ನಾಯಕ ವಿನೀತ್ ಜೋಶಿ ಹೇಳಿದ್ದಾರೆ.
ಸ್ಫೋಟದ ಶಬ್ದ ನಮಗೆ ಕೇಳಿಸಿತು. ಅದು ಹೇಗೆ ಸಂಭವಿಸಿತು? ಗೋಡೆಯ ಮೇಲೆ ನಾವು ಕೆಲವು ಚಿಹ್ನೆಗಳನ್ನು ನೋಡಬಹುದು. ಪೊಲೀಸರು ಮಾತ್ರ ವಿವರಗಳನ್ನು ನೀಡಬಹುದು ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್ದೀಪ್ ಕೌರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಫ್‌ಎಸ್‌ಎಲ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

