ಬೆಂಗಳೂರು: ಪ್ರೀತಿಯ ನೆಪದಲ್ಲಿ ಸಹಪಾಠಿಯ ನಿರಂತರ ಕಿರುಕುಳ ಹಾಗೂ ಬ್ಲಾಕ್ ಮೇಲ್ ಗೆ ಬೇಸತ್ತು ಯುವತಿ ಕೆರೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ 23 ವರ್ಷದ ಯುವತಿ ವಾಣಿ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಅಗ್ರಹಾರ ಕೆರೆಗೆ ಶನಿವಾರ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುದರೂರು ಅಳೂರು ಗ್ರಾಮದ ಆರೋಪಿ ಅಭಿಷೇಕ್ ಮತ್ತು ಯುವತಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಪದವಿ ಶಿಕ್ಷಣ ಮುಗಿದ ಬಳಿಕ ಯುವತಿ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದು ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಆತ್ಮಹತ್ಯೆಗೂ ಮೊದಲು ಯುವತಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಅಭಿಷೇಕ್ ಕಾರಣವೆಂದು ಉಲ್ಲೇಖಿಸಿದ್ದಾರೆ. ಕಾಲೇಜು ದಿನಗಳ ಪರಿಚಯ ಇಟ್ಟುಕೊಂಡು ಅಭಿಷೇಕ್ ಯುವತಿಯ ವಾಟ್ಸಾಪ್ ಗೆ ಹಳೆಯ ವಿಡಿಯೋ ಫೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಆತನ ಕಿರುಕುಳಕ್ಕೆ ನೊಂದು ಕುಟುಂಬದ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಾವಿಗೆ ಕಾರಣನಾದ ಅಭಿಷೇಕ್ ಗೆ ಶಿಕ್ಷೆಯಾಗಬೇಕು ಎಂದು ಡೆತ್ ನೋಟ್ ನಲ್ಲಿ ಒತ್ತಾಯಿಸಿದ್ದಾರೆ. ಅಭಿಷೇಕ್ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
(ಹಕ್ಕುತ್ಯಾಗ: ಈ ಲೇಖನವು ಯಾವುದೇ ರೂಪದಲ್ಲಿ ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಅಥವಾ ಸಂವೇದನಾಶೀಲಗೊಳಿಸಲು ಉದ್ದೇಶಿಸಿಲ್ಲ. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಭಾವನಾತ್ಮಕ ಯಾತನೆ, ಆತ್ಮಹತ್ಯಾ ಆಲೋಚನೆಗಳು ಅಥವಾ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಅನುಭವಿಸುತ್ತಿದ್ದರೆ, ದಯವಿಟ್ಟು ತಕ್ಷಣದ ವೃತ್ತಿಪರ ಸಹಾಯವನ್ನು ಪಡೆಯಿರಿ. ಭಾರತದಲ್ಲಿ, ನೀವು AASRA (24/7) ಅನ್ನು ಸಂಪರ್ಕಿಸಬಹುದು: 91-9820466726 ಅಥವಾ ವಿಶ್ವಾಸಾರ್ಹ ಮಾನಸಿಕ ಆರೋಗ್ಯ ವೃತ್ತಿಪರರು, ವೈದ್ಯರು ಅಥವಾ ಸ್ಥಳೀಯ ತುರ್ತು ಸೇವೆಗಳನ್ನು ಸಂಪರ್ಕಿಸಬಹುದು.)

