ಬಾಂಗ್ಲಾದೇಶದ ರಂಗ್‌ಪುರದಲ್ಲಿ ನಾಲ್ವರು ಸದಸ್ಯರಿದ್ದ ಹಿಂದೂ ಕುಟುಂಬವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಸೇವಿಸುವುದನ್ನು ತಡೆಯಲು ಯತ್ನಿಸಿದ್ದಕ್ಕೆ ಕುಟುಂಬದ ಮುಖ್ಯಸ್ಥ ಗಣಪತಿ ಚಕ್ರವರ್ತಿ ಅವರನ್ನು ಕೊಲೆ ಮಾಡಿದ್ದು, ಬಳಿಕ ಅವರ ಪತ್ನಿ, ಪುತ್ರಿ ಹಾಗೂ 12 ವರ್ಷದ ಪುತ್ರನನ್ನೂ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಬಳಿಕ ಆರೋಪಿಗಳು ಮನೆಯಲ್ಲಿ ಸ್ನಾನ ಮಾಡಿ, ಡ್ರಗ್ಸ್ ಸೇವಿಸಿ, ಸಾಕ್ಷ್ಯ ನಾಶಪಡಿಸಲು ಮೃತರ ಮೊಬೈಲ್‌ಗಳನ್ನು ಡಿಟರ್ಜೆಂಟ್ ನೀರಿನಲ್ಲಿ ಮುಳುಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ನಾಲ್ವರು ಸದಸ್ಯರಿದ್ದ ಹಿಂದೂ ಕುಟುಂಬದ ಹತ್ಯೆ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಆಗಾಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಮ್ ಚಕ್ರವರ್ತಿ (12) ಎಂದು ಗುರುತಿಸಲಾಗಿದೆ.
ಶನಿವಾರ ನಾಲ್ವರೂ ತಮ್ಮ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಗಣಪತಿ ಮತ್ತು ಪ್ರಿಯಮ್ ಅವರ ಕುತ್ತಿಗೆಯ ಸುತ್ತ ಹಗ್ಗ ಅಥವಾ ಸ್ಕಾರ್ಫ್ ಕಂಡುಬಂದಿದ್ದು, ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಡ್ರಗ್ಸ್ ಸೇವಿಸುತ್ತಿದ್ದವರನ್ನು ತಡೆದಿದ್ದಕ್ಕೆ ಹತ್ಯೆ?
ಪೊಲೀಸರ ಪ್ರಕಾರ, ಗಣಪತಿ ಅವರ ನಿರ್ಮಾಣ ಹಂತದಲ್ಲಿದ್ದ ಮನೆಯ ಎರಡನೇ ಮಹಡಿಯ ಮೇಲ್ಛಾವಣಿಗೆ ಅವರ ನೆರೆಮನೆಯಲ್ಲಿದ್ದ ಇಬ್ಬರು ಸಂಬಂಧಿಕರಾದ ಸಿದ್ಧಾರ್ಥ ದಾಸ್ ಮತ್ತು ಮುಗ್ಧ ದಾಸ್ ತೆರಳಿದ್ದರು. ಅಲ್ಲಿ ಅವರು ‘ಯಾಬಾ’ ಎಂಬ ಮೆಥಾಂಫೆಟಮೈನ್ ಆಧಾರಿತ ಮಾದಕ ವಸ್ತುವನ್ನು ಸೇವಿಸುತ್ತಿದ್ದರು ಎನ್ನಲಾಗಿದೆ.
ಶಬ್ದ ಕೇಳಿ ಮೇಲ್ಛಾವಣಿಗೆ ತೆರಳಿದ ಗಣಪತಿ, ಯುವಕರು ಡ್ರಗ್ಸ್ ಸೇವಿಸುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಟವೆಲ್ ಬಳಸಿ ಗಣಪತಿ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣಪತಿ ಅವರ ಕಿರುಚಾಟ ಕೇಳಿ ಪತ್ನಿ ಪ್ರೀತಿಲತಾ ಮೇಲಕ್ಕೆ ತೆರಳಲು ಪ್ರಯತ್ನಿಸಿದ್ದು, ಮೆಟ್ಟಿಲಿನಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ತಮ್ಮ ಗುರುತು ಬಹಿರಂಗವಾಗುವ ಭಯದಿಂದ ಮೇಲಕ್ಕೆ ಬರುತ್ತಿದ್ದ ಪುತ್ರಿ ಆಗಾಮಿಯನ್ನೂ ಆರೋಪಿಗಳು ಕೊಂದಿದ್ದಾರೆ. ನಿದ್ರಿಸುತ್ತಿದ್ದ 12 ವರ್ಷದ ಪುತ್ರ ಪ್ರಿಯಮ್‌ನನ್ನೂ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕವೂ ಮನೆಯಲ್ಲಿ ಉಳಿದುಕೊಂಡಿದ್ದರು!
ವರದಿಗಳ ಪ್ರಕಾರ, ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಬಳಿಕ ಆರೋಪಿಗಳು ತಕ್ಷಣ ಮನೆಯಿಂದ ಪರಾರಿಯಾಗಿರಲಿಲ್ಲ. ಬದಲಿಗೆ ಅವರು ಮನೆಯಲ್ಲಿ ಸ್ನಾನ ಮಾಡಿ, ಫ್ರಿಜ್‌ನಲ್ಲಿದ್ದ ಖರ್ಜೂರ ಮತ್ತು ಸೌತೆಕಾಯಿ ತಿಂದಿದ್ದಾರೆ. ಬಳಿಕ ಮತ್ತೆ ಯಾಬಾ ಸೇವಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರದ ನಮಾಜ್‌ಗೆ ಮುನ್ನ ರಸ್ತೆಗಳು ಖಾಲಿಯಾಗಿದ್ದ ಸಮಯದಲ್ಲಿ ಮನೆಯಿಂದ ಹೊರಬಂದ ಆರೋಪಿಗಳು, ಪ್ರಕರಣವನ್ನು ದರೋಡೆ ಎಂದು ಬಿಂಬಿಸುವ ಉದ್ದೇಶದಿಂದ ಮನೆಯಲ್ಲಿದ್ದ ವಸ್ತುಗಳನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷ್ಯ ನಾಶಪಡಿಸಲು ಮೊಬೈಲ್‌ಗಳನ್ನು ನೀರಿನಲ್ಲಿ ಮುಳುಗಿಸಿದ್ದರು
ಆರೋಪಿಗಳು ಮೃತರ ಮೊಬೈಲ್‌ಗಳನ್ನು ತೆಗೆದುಕೊಂಡು, ಡಿಟರ್ಜೆಂಟ್ ಬೆರೆಸಿದ ನೀರಿನಲ್ಲಿ ಮುಳುಗಿಸಿದ್ದರು. ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಹೀಗೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಲ್ಲಿದ್ದ ಮೇಜಿನ ಮೇಲೆ ಯಾಬಾ ಸೇವನೆಗೆ ಬಳಸಿದ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ಚಿನ್ನದ ಬಳೆಯನ್ನು ಬೆಂಕಿಯಲ್ಲಿ ಪರೀಕ್ಷಿಸಲು ಪ್ರಯತ್ನಿಸಿರುವ ಗುರುತುಗಳೂ ಪೊಲೀಸರಿಗೆ ಸಿಕ್ಕಿವೆ. ಈ ಸುಳಿವುಗಳ ಆಧಾರದ ಮೇಲೆ ಸಿದ್ಧಾರ್ಥ ದಾಸ್ ಮತ್ತು ಮುಗ್ಧ ದಾಸ್ ಅವರನ್ನು ಪೊಲೀಸರು ಗುರುತಿಸಿ ವಶಕ್ಕೆ ಪಡೆದಿದ್ದಾರೆ.
ಮುಗ್ಧ ದಾಸ್ ನಗರದ ಸಿಟಿ ಬಜಾರ್‌ನಲ್ಲಿರುವ ಮೀನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸಿದ್ಧಾರ್ಥ ದಾಸ್ ಕಳೆದ ಸುಮಾರು ಎಂಟು ವರ್ಷಗಳಿಂದ ರಂಗ್‌ಪುರದ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೃತ ಗಣಪತಿ ಚಕ್ರವರ್ತಿ ಕಳೆದ ವರ್ಷ ಡಿಸೆಂಬರ್ 31ರಂದು ರಂಗ್‌ಪುರ ಜಿಲ್ಲಾ ಶಾಲೆಯಿಂದ ನಿವೃತ್ತರಾಗಿದ್ದರು. ಅವರ ಪುತ್ರಿ ಆಗಾಮಿ ಈ ವರ್ಷ ರಂಗ್‌ಪುರ ಕಾರ್ಮೈಕಲ್ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಪುತ್ರ ಪ್ರಿಯಮ್ ರಂಗ್‌ಪುರ ಜಿಲ್ಲಾ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ.
ನಾಲ್ವರು ಕುಟುಂಬ ಸದಸ್ಯರ ಹತ್ಯೆಯನ್ನು ಖಂಡಿಸಿ ರಂಗ್‌ಪುರ ಜಿಲ್ಲಾ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

