ಬೆಂಗಳೂರು: ನೀಟ್ ಪರೀಕ್ಷಾ ಅಕ್ರಮ, ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿ ಇದೀಗ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ನೀಟ್ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಯುವ ಸಮೂಹ ದೇಶಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಗೆ ಕೌಂಟರ್ ನೀಡಲು ಮುಂದಾಗಿರುವ ಬಿಜೆಪಿ, ದೇಶಾದ್ಯಂತ ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಈ ಹೋರಾಟದ ಭಾಗವಾಗಿ ಇಂದು ಬೆಂಗಳೂರಿನಲ್ಲಿಯೂ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ.
ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದು, ಕೆಪಿಸಿಸಿ ಕಚೇರುಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ಕಂಟೋನ್ಮೆಂಟ್ ಬಳಿ ತಡೆದಿದ್ದಾರೆ. ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದ ನೂಕಾಟ-ತಳ್ಳಾಟ ನಡೆದು, ಹೈಡ್ರಾಮಾ ಸೃಷ್ಟಿಯಾಗಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

