ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತ ಸುಜಾತ ಹಂಡಿಯವರನ್ನು ವಿವಸ್ತ್ರಗೊಳಿಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ಜನವರಿ 2ರಂದು ಮಧ್ಯಾಹ್ನ ತನ್ನ ಅಕ್ಕ, ತಾಯಿ ಮೇಲೆ ಡೇವಿಡ್, ಜ್ಞಾನೇಶ್, ನಿರ್ಮಲಾ ಸೇರಿ ಹಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸುಜಾತಾ ಸಹೋದರ ದೂರು ನೀಡಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಸುಮುಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಮಾಡಿದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ತಮ್ಮ ತಪ್ಪಿಲ್ಲ ಎನ್ನುವಂತೆ ಬಿಂಬಿಸಲು ಪೊಲೀಸರು ಮುಂದಾಗಿರುವ ಆರೋಪ ಕೇಳಿ ಬಂದಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ. ಕೇಶ್ವಾಪುರ ಠಾಣೆ ಪಿಐ ಕೆ.ಎಸ್. ಹಟ್ಟಿ ಅವರನ್ನು ಕಮಿಷನರ್ ಕಚೇರಿಯ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿದ್ದು, ಪ್ರಭಾರಿ ಇನ್ಸ್ ಪೆಕ್ಟರ್ ಆಗಿ ಘಂಟಿಕೇರಿ ಠಾಣೆಯ ಬಿ.ಎ. ಜಾಧವ್ ಅವರನ್ನು ನೇಮಕ ಮಾಡಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಲು ಎಸಿಪಿ ಶಿವರಾಜ್ ಕಟಕಬಾವಿ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

