ಬೆಂಗಳೂರು : ಬಿಡದಿ ಸಮಗ್ರ ಟೌನ್ಶಿಪ್ (GBIT) ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಜುಲೈ 17ರಂದು ಬೆಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ನಾಯಕರು, ಶಾಸಕರು, ಸಂಸದರು ಹಾಗೂ ರೈತರು ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಬಿಡದಿ ಪ್ರದೇಶದಲ್ಲಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಫಲವತ್ತಾದ ಕೃಷಿಭೂಮಿಯನ್ನು ಉಳಿಸಬೇಕೆಂದು ಒತ್ತಾಯಿಸಿದೆ.ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರದ ವಿರುದ್ಧ ಪ್ರತಿಭಟಿಸಲಿದೆ.
ಇತ್ತೀಚೆಗೆ ಜಂಟಿ ಭೂಮಾಪನ (JMC) ವೇಳೆ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಜುಲೈ 17ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರುವ ತೀರ್ಮಾನ ಕೈಗೊಂಡಿದೆ.
ಇನ್ನೊಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಸ್ವಇಚ್ಛೆಯಿಂದ ಜಮೀನು ನೀಡಿದರೆ ಮಾತ್ರ ಸರ್ಕಾರ ಸ್ವೀಕರಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಸ್ಪಷ್ಟನೆಯ ನಡುವೆಯೂ ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಆಗ್ರಹಿಸುತ್ತಿವೆ.
ಬಿಡದಿ ಸಮಗ್ರ ಟೌನ್ಶಿಪ್ (GBIT) ಯೋಜನೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದದ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಯಾವುದೇ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ರೈತರು ಸ್ವಇಚ್ಛೆಯಿಂದ ಜಮೀನು ನೀಡಿದರೆ ಮಾತ್ರ ಸರ್ಕಾರ ಸ್ವೀಕರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಾಗ್ಧಾಳಿ
ಓಲೈಕೆಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಿರುವ ರೈತವಿರೋಧಿ @INCKarnataka ಸರ್ಕಾರ, ಲಾಡ್ಲೆ ಮಶಾಕ್ ದರ್ಗಾ ಗಲಭೆಕೋರರು ಮತ್ತು ಪೊಲೀಸ್ ಠಾಣೆ ಮೇಲೆ ಕಲ್ಲೆಸೆದರವರ ಮೇಲಿನ ಕೇಸ್ ವಾಪಸ್ ಪಡೆಯುತ್ತದೆ. ಆದರೆ, ಬದುಕಿಗೆ ಆಧಾರವಾದ ಭೂಮಿ ಬಿಡಲೊಪ್ಪದ ಬಿಡದಿ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತದೆ ದುಷ್ಟ ಸರ್ಕಾರ. ರೈತರ ಕಣ್ಣೀರಿನ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಇರದು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ರಾಜ್ಯದಲ್ಲಿ ಮಳೆಯಿಲ್ಲದೆ ಬೆಳೆ ಒಣಗಿ ರೈತರು ಕಂಗಾಲಾಗಿದ್ದಾರೆ. ಅನ್ನದಾತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೂ, ಈ @INCKarnataka ಸರ್ಕಾರಕ್ಕೆ ಮಾತ್ರ ಅವರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲ. ರೈತರ ಸಾಲ ಮನ್ನಾವೂ ಇಲ್ಲ, ಸೂಕ್ತ ಪರಿಹಾರದ ಭರವಸೆಯೂ ಇಲ್ಲ. ಕೇವಲ ಹೆಸರಿಗಷ್ಟೇ ಅಸ್ತಿತ್ವದಲ್ಲಿದ್ದು, ಕೃಷಿಕರನ್ನು ಸಂಪೂರ್ಣವಾಗಿ ಕೈಬಿಟ್ಟಿರುವ ಇಂತಹ ರೈತವಿರೋಧಿ ಸರ್ಕಾರ ಅಧಿಕಾರದಲ್ಲಿರುವುದಕ್ಕಿಂತ ತೊಲಗುವುದೇ ಲೇಸು ಎಂದು ಬಿಜೆಪಿ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದೆ.

