ಬೆಂಗಳೂರು: ಸಚಿವ ಬಿ. ನಾಗೇಂದ್ರ ರಾಜೀನಾಮೆ ಬಿಜೆಪಿ – ಜೆಡಿಎಸ್ ಹೋರಾಟದ ಫಲ ಎಂದಿರುವ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ನಾಯಕರಿಗೆ ದಲಿತರೇ ಟಾರ್ಗೆಟ್ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಾಗೇಂದ್ರ ತನ್ನನ್ನು ದಲಿತ ಎಂದು ಹೇಳಿಕೊಳ್ಳುತ್ತಿದ್ದು ಬಿಜೆಪಿಯವರಿಗೆ ದಲಿತರೇ ಟಾರ್ಗೆಟ್ ಎನ್ನುತ್ತಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ನೊಂದು ಆತ್ಮಹತ್ಯೆಗೆ ಶರಣಾದ ಅಧಿಕಾರಿ ಚಂದ್ರಶೇಖರ್ ಕೂಡ ದಲಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ನಾಗೇಂದ್ರ ರಾಜೀನಾಮೆ ಪ್ರಕರಣ ಅಪರೂಪದ್ದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ನಾಗೇಂದ್ರ ವಿಚಾರವನ್ನು ವಿಧಾನಸಭೆಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಹೋರಾಟ ನಡೆಸಿದ್ದು, ನಮ್ಮ ಗುರಿ ಆರಂಭದಿಂದಲೂ ಸ್ಪಷ್ಟವಾಗಿತ್ತು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಅಕ್ರಮದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಎರಡನೇ ಬಾರಿ ನಾಗೇಂದ್ರ ರಾಜೀನಾಮೆ ನೀಡುವಂತಾಗಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ. ಹಾಗಾದ್ರೆ ಪಕ್ಷವೇ ಲೂಟಿ ಮಾಡುವಂತೆ ಹೇಳಿಕೊಡ್ತಾ? ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ ಶಿವಕುಮಾರ್ ನಾಗೇಂದ್ರ ಅಮಾಯಕರು. ಅವರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಹಲವು ಆರೋಪಗಳನ್ನು ದಾಖಲಿಸಿವೆ. ಇಡಿ ನಾಲ್ಕು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ನಾಗೇಂದ್ರ ವಿರುದ್ಧ ಆರೋಪಗಳಿವೆ ಎಂದರು.
ನಿಗಮದ ಎಂಡಿ ಆಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ನಾಗೇಂದ್ರ ಕೂಡ ತಮ್ಮನ್ನು ದಲಿತ ಎಂದು ಹೇಳುತ್ತಾರೆ. ಹಾಗಾದರೆ ಚಂದ್ರಶೇಖರ್ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ನ್ಯಾಯವೇನು ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಅವರ ಕುಟುಂಬಕ್ಕೆ ಪಿಂಚಣಿ ಹಾಗೂ ಗ್ರಾಚ್ಯುಯಿಟಿ ನೀಡಿಲ್ಲ. ಅವರ ಮಗನಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. 187 ಕೋಟಿ ರೂ. ಹಣವನ್ನು ಉಳಿಸಿದ ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿದೆ. ಆದರೆ ನಾಗೇಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದೇನಾ ಕಾಂಗ್ರೆಸ್‌ನ ದಲಿತ ಕಾಳಜಿ? ಎಂದು ವಾಗ್ದಾಳಿ ನಡೆಸಿದರು.
ನಾನು ವಿಧಾನಸಭೆಯಲ್ಲಿ ನಾಗೇಂದ್ರ ವಿರುದ್ಧ 37 ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇಷ್ಟೊಂದು ದಾಖಲೆಗಳು ಹೊರಬಂದಿದ್ದರಿಂದಲೇ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಸಿಬಿಐ ನಾಗೇಂದ್ರ ಅವರನ್ನು ಕಿಂಗ್‌ಪಿನ್ ಎಂದು ಹೇಳಿದೆ. ಸಿಬಿಐ ಸುಳ್ಳು ಹೇಳುತ್ತಿದ್ದರೆ ಡಿ.ಕೆ. ಶಿವಕುಮಾರ್ ಸಿಬಿಐ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು.
600 ಖಾತೆಗಳಿಗೆ 187 ಕೋಟಿ ಹಣವನ್ನು ಒಬ್ಬ ಕ್ಲರ್ಕ್ ವರ್ಗಾವಣೆ ಮಾಡಲು ಸಾಧ್ಯವೇ? ಚಂದ್ರಶೇಖರ್ ಅವರ ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಉಲ್ಲೇಖವಿದೆ ಎಂದು ಅಶೋಕ್ ಹೇಳಿದರು.
ಎಫ್‌ಎಸ್‌ಎಲ್ ವರದಿಯಲ್ಲಿ ನೆಕ್ಕುಂಟಿ ನಾಗರಾಜ್ ಅವರೊಂದಿಗೆ ನಾಗೇಂದ್ರ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬ ಮಾಹಿತಿಯಿದೆ. ನಾಗೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ 12 ಪ್ರಕರಣಗಳಿವೆ. ಒಟ್ಟಾರೆ 35 ಪ್ರಕರಣಗಳಿವೆ. ನಾಗೇಂದ್ರ ತಪ್ಪು ಮಾಡಿಲ್ಲ ಎಂದಾದ್ರೆ ಈ ಹಿಂದೆ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಿಂದ ಅವರನ್ನು ಏಕೆ ತೆಗೆದುಹಾಕಿದರು? ಅಂದು ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ರಾಜೀನಾಮೆ ತಡೆಯಲು ಏಕೆ ಪ್ರಯತ್ನಿಸಲಿಲ್ಲ? ಈಗ ದೆಹಲಿಗೆ ಹೋಗಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

