ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ ತುಮಕೂರು ಬಿಜೆಪಿ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕಪಾಳಮೋಕ್ಷ ಮಾಡಿದ ಆರೋಪ ಕಳೆದ ವಾರ ಕೇಳಿಬಂದಿತ್ತು ಹಾಗೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಐಶ್ವರ್ಯ ಚಿಕ್ಕ ಮಕ್ಕಳೊಂದಿಗೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಹಾಗೂ ಬೇಗ ಪ್ರವೇಶ ನೀಡುವಂತೆ ತಾಕೀತು ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಅತಿಯಾದ ಜನಸ್ತೋಮವಿದ್ದ ಕಾರಣ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಬಿ ಅವರು ಆಕೆಯನ್ನು ವಿಶೇಷವಾಗಿ ಒಳಬಿಡಲು ಆಗಲ್ಲ ಎಂದಿದ್ದರು. ಈ ಕಾರಣಕ್ಕೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿತ್ತು.
ಇನ್ನು ಈ ವಿಷಯದ ಕುರಿತಾಗಿ ಶಾಸಕ ಸುರೇಶ್ ಗೌಡ ಸಹ ಪ್ರತಿಕ್ರಿಯಿಸಿ ತಮ್ಮ ಮಗಳು ತಾಳ್ಮೆ ಕಳೆದುಕೊಂಡಿದ್ದು ಸರಿಯಲ್ಲ, ಹೀಗಾಗಿ ಮಗಳ ಪರವಾಗಿ ತಾವು ಕ್ಷಮೆಯಾಚಿಸುತ್ತೇವೆ ಎಂದಿದ್ದರು.
ಹೀಗೆ ಭೀಮನ ಅಮಾವಾಸ್ಯೆಯಂದು ನಡೆದ ಈ ಘಟನೆ ಕುರಿತು ಬಳಿಕ ಯಾವುದೇ ಮಾಹಿತಿ ಹೊರಬೀಳಲಿಲ್ಲ. ಇತ್ತ ಸಾರ್ವಜನಿಕರು ಅಂದೇ ಯಾವುದೇ ಕಾರಣಕ್ಕೂ ಈ ಕುರಿತು ಯಾವುದೇ ಕಾರಣಕ್ಕೂ ಕ್ರಮ ಕೈಗೊಳ್ಳಲ್ಲ, ಏಕೆಂದರೆ ಇದು ರಾಜಕಾರಣಿ ಮನೆಯ ಮಕ್ಕಳ ಪ್ರಕರಣ, ಅವರಿಗೆ ಕಾನೂನು ಅನ್ವಯವಾಗಲ್ಲ ಎಂದೆಲ್ಲ ಕಾಮೆಂಟ್ ಮಾಡಿದ್ದರು.
ಸದ್ಯ ಇದೀಗ ಆ ಘಟನೆಯ ಸಿಸಿಟಿವಿ ವಿಡಿಯೊ ಬಹಿರಂಗವಾಗಿದ್ದು, ಮಾತಿನ ಚಕಮಕಿ ಬಳಿಕ ಐಶ್ವರ್ಯ ಪಿಎಸ್‌ಐ ಸವಿತಾ ಅವರ ಕೆನ್ನೆಗೆ ಬಾರಿಸಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೊವನ್ನು ಹಂಚಿಕೊಳ್ಳುತ್ತಿರುವ ಜನರು ಅವರ ಅಪ್ಪ ಎಂಎಲ್‌ಎ, ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಕುರಿತು ಏನಾದರೂ ಕ್ರಮ ಕೈಗೊಂಡ್ರಾ ಗೃಹ ಸಚಿವರೇ ಎಂದು ಪ್ರಿಯಾಂಕ್ ಖರ್ಗೆಯವರ ಖಾತೆಯನ್ನು ಉಲ್ಲೇಖಿಸಿ ಪ್ರಶ್ನೆ ಹಾಕಿದ್ದಾರೆ.

