ಇಂದು ( ಮೇ 4 ) ದೇಶ ರಾಜಕೀಯದ ಪ್ರಮುಖ ದಿನವಾಗಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೆರಿ, ತಮಿಳುನಾಡು ಹಾಗೂ ಕೇರಳಂ ರಾಜ್ಯ ವಿಧಾಸಭಾ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದೆ. ಸಂಜೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.
ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆರಂಭದಲ್ಲಿ ನಡೆಯುತ್ತಿರುವ ಅಂಚೆ ಮತ ಎಣಿಕೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳಗ್ಗೆ 8.15ರ ವೇಳೆಗೆ ಬಿಜೆಪಿ ಅರ್ಧಶತಕ ಬಾರಿಸಿ ಮುನ್ನಡೆ ಸಾಧಿಸಿದೆ.
ಈ ವೇಳೆಗೆ ಬಿಜೆಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಟಿಎಂಸಿ 47 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಹೀಗೆ ಆರಂಭದ ಟ್ರೆಂಡ್‌ನಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಈ ಬಾರಿ ಬಂಗಾಳದಲ್ಲಿ ಬದಲಾವಣೆಯ ಗಾಳಿ ಬೀಸಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕಮಲ ಅರಳಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಇನ್ನು ಮತ ಎಣಿಕೆಗೂ ಮುನ್ನ ಮಧ್ಯರಾತ್ರಿ 1 ಗಂಟೆಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಮತಗಟ್ಟೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸಿಸಿಟಿವಿ ಆಫ್ ಮಾಡಲಾಗಿದ್ದು, ಅನುಮಾನಾಸ್ಪದವಾಗಿ ವಾಹನಗಳು ಮತಗಟ್ಟೆಗಳನ್ನು ಪ್ರವೇಶಿಸಿವೆ, ಕಾರ್ಯಕರ್ತರೆಲ್ಲರೂ ಎಚ್ಚರಿಕೆಯಿಂದಿರಿ, ದೂರುಗಳನ್ನು ನೀಡಿ ಎಂದು ಕರೆ ನೀಡಿದ್ದರು.

