HomeKarnatakaಇಂದು ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಸಮಾರೋಪ ಸಮಾರಂಭ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸಂಚಾರ...

ಇಂದು ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಸಮಾರೋಪ ಸಮಾರಂಭ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸಂಚಾರ ಮಾರ್ಗ ಬದಲಾವಣೆ

ಬಳ್ಳಾರಿ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೆಪ್ಟೆಂಬರ್ 10 ರಂದು ಬಿಜೆಪಿ ಪಕ್ಷ ವತಿಯಿಂದ ಹಮ್ಮಿಕೊಳ್ಳಲಾಗಿರುವ  ಸಾರ್ವಜನಿಕ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ.

ನಗರದಲ್ಲಿ ಸುಗಮ ಸಂಚಾರ ಕಾಪಾಡುವ ನಿಟ್ಟಿನಲ್ಲಿ ಸಂಚಾರ ಮಾರ್ಗ ಬದಲಾವಣೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಸೂಚನೆಗಳನ್ನು ಹೊರಡಿಸಿದ್ದಾರೆ.

ಭದ್ರತೆಗೆ ಬೃಹತ್ ಪೊಲೀಸ್ ಪಡೆ ನಿಯೋಜನೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಾವೇಶವು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ ಶಾಂತಿಯುತವಾಗಿ ನಡೆಯುವಂತೆ ಮಾಡಲು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರಿ ಭದ್ರತೆ ಒದಗಿಸಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕಾಗಿ 03 ಜನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 04 ಜನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 12 ಜನ ಡಿವೈಎಸ್ಪಿ, 40 ಜನ ಸಿಪಿಐ/ ಪಿಐ, 63 ಜನ ಪಿಎಸ್‌ಐ, 120 ಜನ ಎಎಸ್‌ಐ, 960 ಜನ ಹೆಡ್ ಕಾನ್‌ಸ್ಟೆಬಲ್ / ಕಾನ್‌ಸ್ಟೆಬಲ್, 200 ಜನ ಹೋಂಗಾರ್ಡ್ಸ್, 12 ಐಆರ್‌ಬಿ/ಕೆಎಸ್‌ಆರ್‌ಪಿ ತುಕಡಿಗಳು, 06 ಡಿಎಆರ್ ತುಕಡಿಗಳು ಹಾಗೂ 01 ಕ್ಯೂಆರ್‌ಟಿ ತುಕಡಿಯನ್ನು ನಿಯೋಜಿಸಲಾಗಿದೆ.

ನಿರ್ಬಂಧಿತ/ಬದಲಾದ ಮಾರ್ಗಗಳು:

ಸಾರ್ವಜನಿಕರು ಗಡಿಗಿ ಚೆನ್ನಪ್ಪ ವೃತ್ತ, ಇಂದಿರಾ ವೃತ್ತ, ದುರ್ಗಮ್ಮ ದೇವಸ್ಥಾನ ಸರ್ಕಲ್, ಎಸ್.ಪಿ. ವೃತ್ತ ಹಾಗೂ ಹೆಚ್.ಆರ್.ಗವಿಯಪ್ಪ ವೃತ್ತದ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬಹುದಾಗಿದೆ.

ಸಿರುಗುಪ್ಪ ಕಡೆಯಿಂದ ಬರುವ ವಾಹನಗಳು ವಾಲ್ಮೀಕಿ ವೃತ್ತ(ಎಸ್.ಪಿ. ಸರ್ಕಲ್), ದುರ್ಗಮ್ಮ ಗುಡಿ ಸರ್ಕಲ್ ಮಾರ್ಗವಾಗಿ ಮೋಕಾ ರಸ್ತೆಯನ್ನು ಬಳಸಬೇಕು. ಬೆಂಗಳೂರು ರಸ್ತೆಯಿಂದ ಬರುವ ವಾಹನಗಳು ಅನಂತಪುರ ಬೈಪಾಸ್ ರಸ್ತೆಯನ್ನು ಬಳಸಲು ತಿಳಿಸಲಾಗಿದೆ.

ಕಾರ್ಯಕರ್ತರ ವಾಹನಗಳ ನಿಲುಗಡೆಗೆ ವ್ಯವಸ್ಥೆ:

ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುವವರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಬಸ್ ಗಳು: ಬಸ್ ಗಳಲ್ಲಿ ಬರುವ ಕಾರ್ಯಕರ್ತರನ್ನು ಸಂಗಮ್ ಸರ್ಕಲ್‌ನಲ್ಲಿ ಇಳಿಸಿ, ಬಸ್ ಗಳನ್ನು ಅನಂತಪುರ ರಸ್ತೆಯ ಬೈಪಾಸ್ ರಸ್ತೆ ಹಾಗೂ ಮೋಕಾ ರಸ್ತೆಯಲ್ಲಿ ನಿಲುಗಡೆ ಮಾಡಬೇಕು.

ಕಾರುಗಳು: ಕಾರುಗಳಲ್ಲಿ ಬರುವವರು ಸಂಗಮ್ ಸರ್ಕಲ್‌ನಿಂದ ಅನಂತಪುರ ರಸ್ತೆಯ ಬೈಪಾಸ್‌ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆ ಮಾಡಬೇಕು.

ದ್ವಿಚಕ್ರ ವಾಹನಗಳು: ಸಂಗಮ್ ಸರ್ಕಲ್‌ನಿಂದ ಕೂಲ್ ಕಾರ್ನರ್‌ವರೆಗೆ ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಹಾಗೂ ಮತ್ತೊಂದು ಬದಿಯಲ್ಲಿ ಕಾರುಗಳನ್ನು ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಉಚಿತ ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗಾಗಿ 10 ದಿನಗಳ ಉಚಿತ ‘ಉದ್ಯಮಶೀಲತಾ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ಈ ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳು, ಬ್ಯಾಂಕಿಂಗ್ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ ಸೇರಿದಂತೆ ಮುಂತಾದ ಪ್ರಮುಖ ವಿಷಯಗಳ ಕುರಿತು ಸಮಗ್ರ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗುತ್ತದೆ.

ಅರ್ಹತೆಗಳು:

ಬಳ್ಳಾರಿ ಜಿಲ್ಲೆಯ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿದಾರರು 18 ರಿಂದ 45 ವರ್ಷ ವಯೋಮಿತಿಯವರಾಗಿದ್ದು, ಓದಲು ಮತ್ತು ಬರೆಯಲು ತಿಳಿದಿರಬೇಕು. ಮಹಿಳೆಯರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿ ಕಟ್ಟಡ, ಹೊಸಪೇಟೆ ರಸ್ತೆ, ಬಳ್ಳಾರಿ ಅಥವಾ ಆಸಕ್ತರು ಕಚೇರಿ ವೇಳೆಯಲ್ಲಿ ನಿಗದಿತ ವಿಳಾಸದಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು ಅಥವಾ ಮೊಬೈಲ್ ಸಂಖ್ಯೆ 9449226221 ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಿಡಾಕ್‌ನ ಉಪ ನಿರ್ದೇಶಕರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular