ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಕೌನ್ಸಿಲರ್ ಕಿಶನ್ ನಾಯಕ್ ಅವರು ನಗರ ಪಾಲಿಕೆಯ ನಿರ್ಲಕ್ಷ್ಯವನ್ನು ವಿರೋಧಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೊಣಕಾಲಿನಷ್ಟು ಕೊಳಚೆ ನೀರು ತುಂಬಿದ್ದ ಚರಂಡಿಯೊಳಗೆ ನಿಂತು ಜನ್ಮದಿನದ ಕೇಕ್ ಕತ್ತರಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ವಾರ್ಡ್‌ನಲ್ಲಿರುವ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಶನ್ ನಾಯಕ್ ಆರೋಪಿಸಿದ್ದಾರೆ. ಸುಮಾರು 12 ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಈ ರೀತಿಯ ಪ್ರತಿಭಟನೆಗೆ ಮುಂದಾದರು ಎಂದು ತಿಳಿಸಿದ್ದಾರೆ.
ಇನ್ನು ಅಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಪಕ್ಷವೇ. ಹೀಗೆ ತಾನೇ ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿದ್ದರೂ ತನ್ನ ಮನವಿಗೆ ಸ್ಪಂದಿಸದ ಕಾರಣ ರೊಚ್ಚಿಗೆದ್ದು ಈ ರೀತಿ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯ ವೇಳೆ ಸ್ಥಳೀಯ ನಿವಾಸಿಗಳೂ ಭಾಗವಹಿಸಿ ನಗರ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಚರಂಡಿಯ ಮಧ್ಯೆ ಮೇಜು ಇಟ್ಟು ಅದರ ಮೇಲೆ ಕೇಕ್ ಇರಿಸಿ ಪಾರ್ಷದ್ ಜನ್ಮದಿನ ಆಚರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

