ಬೆಂಗಳೂರು- ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಪಾಠ ಬೇಕಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯನ್ನು ವಿರೋಧಿಸಿ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಅವರು ಕಟು ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ವಿಧಿಗಳ ಬಗ್ಗೆ ಹರಿಪ್ರಸಾದ್ ವಿವರಣೆ
ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಿಕೊಳ್ಳಲಿ ಎಂದು ಸಲಹೆ ನೀಡಿರುವ ಹರಿಪ್ರಸಾದ್, ಸಂವಿಧಾನದ ವಿಧಿಗಳ ಬಗ್ಗೆ ಪಾಠ ಮಾಡಿದ್ದಾರೆ:
ವಿಧಿ 178: ವಿಧಾನಸಭೆಯ ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರನ್ನು ವಿಧಾನಸಭೆಯೇ ಆಯ್ಕೆ ಮಾಡುತ್ತದೆ.
ವಿಧಿ 182: ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯನ್ನು ವಿಧಾನಪರಿಷತ್ತೇ ಆಯ್ಕೆ ಮಾಡುತ್ತದೆ.ಕಾಂಗ್ರೆಸ್ ಪಕ್ಷವು ಕೇವಲ ತನ್ನ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿ ಪ್ರಕಟಿಸಿದೆ ಅಷ್ಟೆ ಹೊರತು, ನೇರವಾಗಿ ಅವರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಸದನದಲ್ಲಿ ನಡೆಯಬೇಕಾದ ಅಧಿಕೃತ ಆಯ್ಕೆ ಪ್ರಕ್ರಿಯೆ ಎಂದಿನಂತೆಯೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಹಿಂದಿನ ನಡವಳಿಕೆ ಎತ್ತಿ ತೋರಿದ ಹರಿಪ್ರಸಾದ್
ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯನ್ನು ‘ಸಂವಿಧಾನ ವಿರೋಧಿ’ ಎಂದು ಕೂಗುತ್ತಿರುವುದು ಬಿಜೆಪಿಯ ಅಜ್ಞಾನದ ಪ್ರದರ್ಶನ ಎಂದು ಜರಿದಿರುವ ಹರಿಪ್ರಸಾದ್, ಈ ಹಿಂದೆ ಸ್ವತಃ ಬಿಜೆಪಿ ನಡೆದುಕೊಂಡ ಬಂದ ಹಾದಿಯನ್ನು ಉದಾಹರಿಸಿದ್ದಾರೆ.
ಬಿಜೆಪಿಯ ಕೇಂದ್ರ ನಾಯಕತ್ವವೇ ಕರ್ನಾಟಕ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಅಂತಿಮಗೊಳಿಸಿ, ನಾಮಪತ್ರ ಸಲ್ಲಿಸುವಂತೆ ನಿರ್ದೇಶಿಸಿರಲಿಲ್ಲವೇ? ಲೋಕಸಭೆಯ ಅಧಿಕೃತ ಚುನಾವಣೆಗೂ ಮೊದಲೇ ಓಂ ಬಿರ್ಲಾ ಅವರನ್ನು ಎನ್ಡಿಎ ಅಭ್ಯರ್ಥಿಯಾಗಿ ಬಹಿರಂಗವಾಗಿ ಪ್ರಕಟಿಸಿರಲಿಲ್ಲವೇ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರೇ ಸದನದ ಆಯ್ಕೆಗೂ ಮುನ್ನ ರಥೀಂದ್ರ ಬೋಸ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಿರಲಿಲ್ಲವೇ? “ಬಿಜೆಪಿ ಮಾಡಿದರೆ ಅದು ಅಭ್ಯರ್ಥಿಯ ಆಯ್ಕೆ, ಅದೇ ಕಾಂಗ್ರೆಸ್ ಮಾಡಿದರೆ ಸಂವಿಧಾನ ವಿರೋಧವೇ?” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂವಿಧಾನದ ಪಾವಿತ್ರ್ಯದ ಬಗ್ಗೆ ಮಾತನಾಡುವ ಬಿಜೆಪಿ ಮೊದಲು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಪ್ರಾಣೇಶ್ ಆಯ್ಕೆ ವಿವಾದ ನೆನಪಿಸಿದ ಹರಿಪ್ರಸಾದ್
ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲದ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಸೇರಿಸಿ, ಕೇವಲ 6 ಮತಗಳ ಅಂತರದಲ್ಲಿ ಗೆದ್ದ ಎಂ.ಕೆ. ಪ್ರಾಣೇಶ್ ಅವರನ್ನು ವಿಧಾನಪರಿಷತ್ತಿನ ಉಪಸಭಾಪತಿ ಹುದ್ದೆಯಲ್ಲಿ ಕೂರಿಸಿದಾಗ ಬಿಜೆಪಿಗೆ ಸಂವಿಧಾನ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಾಂವಿಧಾನಿಕ ಅಕ್ರಮವನ್ನು ಮುಚ್ಚಿಹಾಕಲು ಮತದಾನದ ಗೌಪ್ಯತೆಯನ್ನು ನೆಪವಾಗಿ ಬಳಸಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು, ಪ್ರಾಣೇಶ್ ಅವರ ಆಯ್ಕೆ ಚುನಾವಣೆಯನ್ನೇ ರದ್ದುಗೊಳಿಸಿದೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.
ಅಸಿಂಧು ಮತಗಳ ಬಲದಿಂದ ಗೆದ್ದವರನ್ನು ಉನ್ನತ ಹುದ್ದೆಯಲ್ಲಿ ಕೂರಿಸಲು ನಾಚಿಕೆಯಾಗದವರು, ಇಂದು ಪಕ್ಷದ ಅಧಿಕೃತ ಲೆಟರ್ಹೆಡ್ನಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದನ್ನು ವಿರೋಧಿಸಿ ಬಿಟ್ಟಿ ಪ್ರವಚನ ಮಾಡುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ತೀವ್ರವಾಗಿ ಆಕ್ಷೇಪಿಸಿದ್ದಾರೆ.

