ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಮತ್ತು ಆರ್.ಎಸ್.ಎಸ್. ಕಟ್ಟಾಳು ಬಿ.ಸಿ. ನಾಗೇಶ್ ಅವರು ಮಂಗಳವಾರ ಬೆಂಗಳೂರಿನ ಜಯನಗರದ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2008 ಮತ್ತು 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ನಾಗೇಶ್ ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಲಿ ನಿಧನರಾಗಿದ್ದಾರೆ. ಬುಧವಾರ ತಿಪಟೂರಿನಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.
ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರಿಗೆ ಎರಡು ಸಲ ಆಪರೇಷನ್ ಆಗಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ನಾಯಕರು ಕಂಬನಿ ಬರೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ನಾಗೇಶ್ ಅವರು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಿದ್ಧರಾಮಯ್ಯ ಸಂತಾಪ
ಬಿಜೆಪಿ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಆದ ಬಿ.ಸಿ.ನಾಗೇಶ್ ಅವರ ನಿಧನವಾರ್ತೆ ನೋವುಂಟು ಮಾಡಿದೆ. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ನಾಗೇಶ್ ಅವರು ಅಧಿಕಾರ, ಮಂತ್ರಿಗಿರಿ ಈ ಎಲ್ಲವೂ ಇದ್ದಾಗಲೂ ಆಡಂಬರದ ಬದುಕಿನಿಂದ ದೂರ ಉಳಿದು ಸಮಾಜಕ್ಕೆ ಮಾದರಿಯಾಗಿದ್ದವರು. ನಾಗೇಶ್ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿ ಬಳಗಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ.
ವಿಜಯೇಂದ್ರ ಸಂತಾಪ
ಪಕ್ಷದ ಹಿರಿಯ ನಾಯಕರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರೂ ಆದ ಬಿ.ಸಿ.ನಾಗೇಶ್ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಸರಳತೆ, ವೈಚಾರಿಕ ಬದ್ಧತೆ, ನಿಷ್ಠೆ ಹಾಗೂ ಜನಪರ ಕಾಳಜಿಯ ವ್ಯಕ್ತಿತ್ವದಿಂದಲೇ ಹೆಸರಾಗಿದ್ದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ಮಾಡಿರುವ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಮತ್ತು ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಅಪಾರ. ಅವರ ನಿರ್ಗಮನದಿಂದ ನಮ್ಮ ಪಕ್ಷ ಹಾಗೂ ನಾಡು ಒಬ್ಬ ಸಜ್ಜನಿಕೆಯ ಜನಪ್ರತಿನಿಧಿ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

