ರಾಯಚೂರು: ರೈತ ಮಹಿಳೆಯರ ಆಶೀರ್ವಾದವೇ ಶ್ರೀರಕ್ಷೆ, ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ,
ಮಸ್ಕಿಯ ಗುಡದೂರದಿಂದ ಆರಂಭಗೊಂಡ ‘ಬಳ್ಳಾರಿ ಚಲೋ’ ಪಾದಯಾತ್ರೆಯ 3ನೇ ದಿನದ ನಡಿಗೆಯ ಸಂದರ್ಭದಲ್ಲಿ ದಾರಿಯುದ್ದಕ್ಕೂ ಕಂಡುಬಂದದ್ದು ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಕ್ರೋಶ ಎಂದು ತಿಳಿಸಿದ್ದಾರೆ.
ಪಾಂಡುರಂಗ ಕ್ಯಾಂಪ್‌ಗೆ ಭೇಟಿ ನೀಡಿ, ಗದ್ದೆಯಲ್ಲಿ ಭತ್ತದ ಸಸಿ ನೆಡುತ್ತಿದ್ದ ರೈತಬಂಧುಗಳು ಹಾಗೂ ಮಹಿಳಾ ಕಾರ್ಮಿಕರೊಂದಿಗೆ ಜಮೀನಿಗಿಳಿದು ಸಾಂಕೇತಿಕವಾಗಿ ನೆಟ್ಟಿ ಕಾರ್ಯದಲ್ಲಿ ಭಾಗಿಯಾಗಿ ಅವರೊಂದಿಗೆ ಸ್ವಲ್ಪ ಸಮಯ ಕಳೆದರು.
ಬರ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಜೊತೆಗೆ ನೂರೆಂಟು ಸವಾಲುಗಳ ನಡುವೆಯೂ ಮಣ್ಣನ್ನೇ ನಂಬಿ ದುಡಿಯುತ್ತಿರುವ ನಮ್ಮ ಅನ್ನದಾತರ ಧೈರ್ಯಕ್ಕೆ ಶರಣೆನ್ನಲೇ ಬೇಕು. ಯಾತ್ರೆಗೆ ವಿಶೇಷವಾಗಿ ಹಿರಿಯ ನಾಗರಿಕರು, ನಮ್ಮ ತಾಯಂದಿರು ಹಾಗೂ ಯುವಜನತೆ ನಮ್ಮ ಮೇಲೆ ತೋರುತ್ತಿರುವ ಅಭಿಮಾನ, ಆತ್ಮೀಯತೆ, ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲ, ನಮ್ಮ ಹೋರಾಟದ ಹಾದಿಗೆ ಆನೆಬಲ ನೀಡಿದೆ.
ರೈತರು ಮತ್ತು ಶ್ರಮಿಕರ ಹಕ್ಕಿಗಾಗಿ ನಮ್ಮ ಈ ಜನಾಂದೋಲನ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಛೆತ್ತುಕೊಂಡು, ಕೂಡಲೇ 190ಕ್ಕೂ ಹೆಚ್ಚು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು, 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ನಾಯಕರು, ಪ್ರಮುಖರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಜೊತೆಗಿದ್ದರು.

