ಪಾಟ್ನಾ: ಬಿಹಾರದ ಪೂರ್ಣಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಟ್ಗಾಮಾ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಾಮಾಚಾರದ ಆರೋಪದ ಮೇಲೆ ಒಂದೇ ಕುಟುಂಬದ ಐವರನ್ನು ಕ್ರೂರವಾಗಿ ಥಳಿಸಿ ನಂತರ ಜೀವಂತವಾಗಿ ಸುಟ್ಟುಹಾಕಲಾಗಿದೆ.
ಈ ಭೀಕರ ಕೊಲೆ ಸಮುದಾಯದಲ್ಲಿ ಆಘಾತ ಮೂಡಿಸಿದೆ. ಎಲ್ಲಾ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ.
ಮೃತರನ್ನು ಬಾಬು ಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸಾಮತ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಘಟನೆಯ ನಂತರ, ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅನೇಕ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪೊಲೀಸರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಎಫ್‌ಎಸ್‌ಎಲ್ ತಂಡದೊಂದಿಗೆ ಶ್ವಾನ ದಳವು ತನಿಖೆ ನಡೆಸುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಕುಲ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಕುಟುಂಬದವರನ್ನು ಜೀವಂತವಾಗಿ ಸುಡುವಂತೆ ನಕುಲ್ ಪ್ರಚೋದಿಸಿದ ಆರೋಪ ಹೊರಿಸಲಾಗಿದೆ.
ಮೃತರ ಕುಟುಂಬದ ಏಕೈಕ ಸದಸ್ಯ ಲಲಿತ್ ಭಯಾನಕ ಘಟನೆಯನ್ನು ವಿವರಿಸಿದ್ದು, ತನ್ನ ಇಡೀ ಕುಟುಂಬವನ್ನು ಮೊದಲು ಮಾಟಗಾರಾರರು ಎಂಬ ಆರೋಪದ ಮೇಲೆ ನಿರ್ದಯವಾಗಿ ಥಳಿಸಲಾಯಿತು, ನಂತರ ಬೆಂಕಿ ಹಚ್ಚುವ ಮೊದಲು ಹೊಡೆದು ಕೊಂದರು. ಸುಟ್ಟ ನಂತರ, ಶವಗಳನ್ನು ನೀರಿಗೆ ಎಸೆಯಲಾಯಿತು. ಹೇಗೋ, ನಾನು ನನ್ನ ಪ್ರಾಣವನ್ನು ಉಳಿಸಿಕೊಂಡೆ ಎಂದು ಘಟನೆಯಿಂದ ಆಘಾತಕ್ಕೊಳಗಾದ ಅವರು ಹೇಳಿದ್ದಾರೆ.