ಭಾರತದಲ್ಲಿ ಐಐಟಿ-ಜೆಇಇ (IIT-JEE) ಪರೀಕ್ಷೆ ಎಂದರೆ ಅದು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳು ವರ್ಷಗಟ್ಟಲೆ ಓದಿದರೂ ಈ ಪರೀಕ್ಷೆ ಪಾಸ್ ಮಾಡುವುದು ಸುಲಭವಲ್ಲ. ಇಂತಹ ಕಠಿಣ ಪರೀಕ್ಷೆಯನ್ನು ಕೇವಲ 13ನೇ ವಯಸ್ಸಿಗೆ ಭೇದಿಸಿ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸಾಧಕ ಸತ್ಯಂ ಕುಮಾರ್. ಬಿಹಾರದ ಪುಟ್ಟ ಹಳ್ಳಿಯಿಂದ ಬಂದ ಈ ಹುಡುಗ ಈಗ ಜಾಗತಿಕ ಮಟ್ಟದ ತಂತ್ರಜ್ಞಾನ ಲೋಕದಲ್ಲಿ ಮಿಂಚುತ್ತಿದ್ದಾರೆ.
ಬಾಲ್ಯದಲ್ಲೇ ಅಚ್ಚರಿ ಮೂಡಿಸಿದ ಮೇಧಾವಿ
ಬಿಹಾರದ ಭೋಜ್‌ಪುರ ಜಿಲ್ಲೆಯ ಬಖೋರಾಪುರ ಎಂಬ ಗ್ರಾಮದ ಕೃಷಿಕ ಕುಟುಂಬದಲ್ಲಿ 1999ರಲ್ಲಿ ಸತ್ಯಂ ಕುಮಾರ್ ಜನಿಸಿದರು. ಬಾಲ್ಯದಿಂದಲೇ ಅಸಾಧಾರಣ ಬುದ್ಧಿವಂತಿಕೆ ಹೊಂದಿದ್ದ ಈತನ ಪ್ರತಿಭೆಯನ್ನು ಗುರುತಿಸಿದ ಕುಟುಂಬದ ಹಿತೈಷಿಯೊಬ್ಬರು ಸತ್ಯಂನನ್ನು ರಾಜಸ್ಥಾನದ ಕೋಟಾಕ್ಕೆ ಕಳುಹಿಸುವಂತೆ ಸಲಹೆ ನೀಡಿದರು. ಈ ಒಂದು ನಿರ್ಧಾರ ಸತ್ಯಂ ಬದುಕನ್ನೇ ಬದಲಿಸಿತು.
ಅತಿ ಕಿರಿಯ ವಯಸ್ಸಿನ ಐಐಟಿಯನ್
ಸತ್ಯಂ ಕುಮಾರ್ ಮೊದಲು 2012ರಲ್ಲಿ ತಮ್ಮ 12ನೇ ವಯಸ್ಸಿನಲ್ಲಿ ಐಐಟಿ ಪರೀಕ್ಷೆ ಬರೆದು 8,137ನೇ ಶ್ರೇಣಿ ಪಡೆದಿದ್ದರು. ಆದರೆ ಈ ಫಲಿತಾಂಶದಿಂದ ತೃಪ್ತರಾಗದ ಅವರು, ಮರು ವರ್ಷ ಅಂದರೆ 2013ರಲ್ಲಿ ಕೇವಲ 13ನೇ ವಯಸ್ಸಿಗೆ ಮತ್ತೆ ಪರೀಕ್ಷೆ ಬರೆದು ಅಖಿಲ ಭಾರತ ಮಟ್ಟದಲ್ಲಿ 670ನೇ ಶ್ರೇಣಿ (AIR 670) ಪಡೆದರು. 360 ಅಂಕಗಳಿಗೆ 292 ಅಂಕ ಗಳಿಸುವ ಮೂಲಕ ಭಾರತದ ಅತಿ ಕಿರಿಯ ಐಐಟಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ 14ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದ ಸಹಕ್ ಕೌಶಿಕ್ ಅವರ ದಾಖಲೆಯನ್ನು ಸತ್ಯಂ ಅಳಿಸಿಹಾಕಿದರು.
ಆಪಲ್‌ನಿಂದ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ವರೆಗೆ
ಐಐಟಿ ಕಾನ್ಪುರದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿ ಮುಗಿಸಿದ ಸತ್ಯಂ, ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. ಅಲ್ಲಿನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕೇವಲ 24ನೇ ವಯಸ್ಸಿಗೆ ಪಿಎಚ್‌ಡಿ ಪದವಿ ಪೂರೈಸಿದರು. ಇವರ ಸಾಧನೆಯನ್ನು ಗಮನಿಸಿದ ವಿಶ್ವದ ದೈತ್ಯ ಕಂಪನಿ ‘ಆಪಲ್’ (Apple), ಇವರಿಗೆ ಮಷಿನ್ ಲರ್ನಿಂಗ್ ಇಂಟರ್ನ್ ಆಗಿ ಕೆಲಸ ಮಾಡಲು ಅವಕಾಶ ನೀಡಿತ್ತು.
ಪ್ರಸ್ತುತ ಎಲ್ಲಿದ್ದಾರೆ?
ಲಿಂಕ್ಡ್‌ಇನ್ ಮಾಹಿತಿಯ ಪ್ರಕಾರ, ಸತ್ಯಂ ಕುಮಾರ್ ಪ್ರಸ್ತುತ ವಿಶ್ವದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಯಾದ ‘ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್’ನಲ್ಲಿ (Texas Instruments) ಮಷಿನ್ ಲರ್ನಿಂಗ್ ಸಿಸ್ಟಮ್ಸ್ ರಿಸರ್ಚ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರದ ಕುಗ್ರಾಮದಿಂದ ಅಮೆರಿಕದ ಟೆಕ್ ಸಂಸ್ಥೆಯವರೆಗೆ ಸಾಗಿಬಂದ ಸತ್ಯಂ ಪಯಣ ಇಂದಿನ ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ.

