ವಾಟ್ಸಾಪ್, ಟೆಲಿಗ್ರಾಮ್ʼನಂತಹ ಆ್ಯಪ್‌ಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ಮಾರ್ಚ್ 1 ರಿಂದ ನಿಯಮಗಳು ಸಂಪೂರ್ಣವಾಗಿ ಬದಲಾಗಲಿವೆ. ಇನ್ನು ಮುಂದೆ ವಾಟ್ಸಾಪ್ ಬಳಸಬೇಕಾದರೆ ಫೋನ್‌ನಲ್ಲಿ ಸಿಮ್ ಕಾರ್ಡ್ ಇರುವುದು ಕಡ್ಡಾಯ. ಟೆಲಿಗ್ರಾಮ್‌ನಂತಹ ಇತರ ಆ್ಯಪ್‌ಗಳಿಗೂ ಇದೇ ನಿಯಮ ಅನ್ವಯವಾಗಲಿದೆ.
ನಾಳೆಯಿಂದ ಮಾರ್ಚ್ ತಿಂಗಳು ಆರಂಭವಾಗಲಿದ್ದು, ಜನರ ಮೇಲೆ ಪ್ರಭಾವ ಬೀರುವ ಹಲವು ಬದಲಾವಣೆಗಳು ಜಾರಿಗೆ ಬರಲಿವೆ. ಈ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವುದು ಅವಶ್ಯಕ.
ಏನಿದು ಹೊಸ ನಿಯಮ? (ಸಿಮ್ ಕಾರ್ಡ್ ಬೈಂಡಿಂಗ್)
- ಸಿಮ್ ಇಲ್ಲದಿದ್ದರೆ ಆ್ಯಪ್ ಬಂದ್: ಮಾರ್ಚ್ 1 ರಿಂದ ವಾಟ್ಸಾಪ್‌ಗೆ ‘ಸಿಮ್ ಕಾರ್ಡ್ ಬೈಂಡಿಂಗ್’ (SIM Card Binding) ನಿಯಮ ಜಾರಿಗೆ ಬರಲಿದೆ. ನಿಮ್ಮ ಫೋನ್‌ನಲ್ಲಿ ಸಿಮ್ ಇಲ್ಲದಿದ್ದರೆ ನೀವು ಇನ್ನು ಮುಂದೆ ವಾಟ್ಸಾಪ್ ಬಳಸಲು ಸಾಧ್ಯವಿಲ್ಲ; ಅದು ತಾನಾಗಿಯೇ ಲಾಗ್ ಔಟ್ (Log out) ಆಗುತ್ತದೆ.
- ಹಳೆಯ ವಿಧಾನಕ್ಕೆ ಬ್ರೇಕ್: ಇದುವರೆಗೆ ಸಿಮ್ ಒಂದು ಫೋನ್‌ನಲ್ಲಿದ್ದರೂ, ಬೇರೆ ಫೋನ್‌ನಲ್ಲಿ (ವೈಫೈ ಮೂಲಕ) ವಾಟ್ಸಾಪ್ ಬಳಸುವ ಸೌಲಭ್ಯವಿತ್ತು. ಇನ್ನು ಮುಂದೆ ಇದು ಸಾಧ್ಯವಿಲ್ಲ.
- ವಾಟ್ಸಾಪ್ ವೆಬ್ ನಿಯಮ: ಇನ್ನುಮುಂದೆ ವಾಟ್ಸಾಪ್ ವೆಬ್ (WhatsApp Web) ಕೂಡ ಪ್ರತಿ 6 ಗಂಟೆಗೊಮ್ಮೆ ತಾನಾಗಿಯೇ ಲಾಗ್ ಔಟ್ ಆಗಲಿದೆ.
- ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೆ ಆ್ಯಪ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಮತ್ತೆ ಆ್ಯಪ್ ಬಳಸಬೇಕಾದರೆ ಸಿಮ್ ಕಾರ್ಡ್ ಹಾಕಲೇಬೇಕು.
ಕೇಂದ್ರ ಟೆಲಿಕಾಂ ಇಲಾಖೆಯ ಆದೇಶ
ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣ ಆ್ಯಪ್‌ಗಳಿಗೆ ‘ಸಿಮ್ ಬೈಂಡಿಂಗ್’ ನಿಯಮವನ್ನು ಕೇಂದ್ರ ಟೆಲಿಕಾಂ ಇಲಾಖೆ ಕಡ್ಡಾಯಗೊಳಿಸಿದೆ. ಅಕ್ರಮಗಳನ್ನು ತಡೆಗಟ್ಟಲು ಮತ್ತು ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಪ್ರಕಟಣೆ ಹೊರಡಿಸಲಾಗಿದ್ದು, ಇದನ್ನು ಜಾರಿಗೆ ತರಲು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಫೆಬ್ರವರಿ 28ರವರೆಗೆ ಗಡುವು ನೀಡಲಾಗಿತ್ತು.
ಪ್ರಸ್ತುತ ವ್ಯವಸ್ಥೆಗೂ, ಹೊಸ ಬದಲಾವಣೆಗೂ ಏನು ವ್ಯತ್ಯಾಸ?
ಪ್ರಸ್ತುತ ಆ್ಯಪ್ ಇನ್‌ಸ್ಟಾಲ್ ಮಾಡುವಾಗ ಮಾತ್ರ ಫೋನ್‌ನಲ್ಲಿ ಸಿಮ್ ಕಾರ್ಡ್ ಪರಿಶೀಲನೆ (Verification) ಕೇಳಲಾಗುತ್ತದೆ. ಒಮ್ಮೆ ಈ ಪರಿಶೀಲನಾ ಪ್ರಕ್ರಿಯೆ ಮುಗಿದ ನಂತರ, ಫೋನ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೂ ವಾಟ್ಸಾಪ್, ಟೆಲಿಗ್ರಾಮ್, ಅರಟ್ಟೈ ಮುಂತಾದ ಆ್ಯಪ್‌ಗಳು ಕೆಲಸ ಮಾಡುತ್ತವೆ.
ಸೈಬರ್ ವಂಚಕರು ಈ ಅವಕಾಶವನ್ನು ಬಳಸಿಕೊಂಡು ಸುಲಭವಾಗಿ ಅಕ್ರಮಗಳನ್ನು ಎಸಗುತ್ತಿದ್ದರು. ಹೊಸ ‘ಸಿಮ್ ಬೈಂಡಿಂಗ್’ ನಿಯಮ ಜಾರಿಗೆ ಬರುವುದರಿಂದ ಇಂತಹ ವಂಚನೆಗಳಿಗೆ ಬ್ರೇಕ್ ಬೀಳಲಿದೆ.

