ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸುತ್ತಿದೆ. ಇದೇ ವೇಳೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗತೊಡಗಿದ್ದು, ಅಕ್ಕಿ ದರ ಕೆಜಿಗೆ 13 ರಿಂದ 15 ರೂಪಾಯಿವರೆಗೂ ಏರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ದುಬಾರಿಯಾಗಬಹುದು ಎಂದು ಹೇಳಲಾಗಿದೆ. ಕೆಜಿಗೆ 45 ರಿಂದ 48 ರೂ. ಇದ್ದ ಸ್ಟೀಮ್ ಅಕ್ಕಿ ದರ 55 ರಿಂದ 58 ರೂ. ಆಗಿದೆ. ಕೆಜಿಗೆ 65 ರಿಂದ 70 ರೂಪಾಯಿ ಇದ್ದ ರಾ ರೈಸ್ ದರ 80 ರಿಂದ 83 ರೂಪಾಯಿ ಆಗಿದೆ. ಕೆಜಿಗೆ 43 ರಿಂದ 45 ರೂ. ಇದ್ದ ಸಕ್ಕರೆ ದರ 46 ರಿಂದ 47 ರೂ.ಗೆ ಏರಿಕೆಯಾಗಿದೆ. ಕೆಜಿಗೆ 135 ರಿಂದ 145 ರೂ. ಇದ್ದ ಶೇಂಗಾ ದರ 150 ರಿಂದ 160 ರೂ.ಗೆ ತಲುಪಿದೆ. ಕೆಜಿಗೆ 30ರಿಂದ 35 ರೂ. ಇದ್ದ ಜೋಳದ ದರ 60 ರಿಂದ 65 ರೂ.ಗೆ ತಲುಪಿದೆ. ಕೆಜಿಗೆ 110 ರಿಂದ 120 ರೂ.ವರೆಗೂ ಮಾರಾಟವಾಗುತ್ತಿದ್ದ ಉದ್ದು ದುರ 120 ರಿಂದ 146 ರೂಪಾಯಿವರೆಗೆ ಏರಿಕೆಯಾಗಿದೆ.
ಆರ್.ಎನ್.ಆರ್. ಸೋನಾ, ಶ್ರೀರಾಮ ಸೋನಾ ಅಕ್ಕಿಯ ಸಗಟು ಬೆಲೆ ಏರಿಕೆಯಾಗುತ್ತಿದ್ದು, ಚಿಲ್ಲರೆ ದರ ಕೂಡ ಏರಿಕೆಯಾಗಿದೆ. ಮಳೆ ಕೊರತೆಯ ಪರಿಣಾಮ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

