ನವದೆಹಲಿ: ಕೇಂದ್ರ ಸರ್ಕಾರವು ಬಡವರಿಗೆ ಶಾಕ್ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸರ್ಕಾರವು ಹಲವು ದಿನಗಳಿಂದ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುತ್ತಾ ಬಂದಿದೆ. ಇದೀಗ ಈ ಯೋಜನೆಯಲ್ಲಿ ಸರ್ಕಾರ ಕಡಿತ ಮಾಡಿದೆ.
ವರ್ಷಕ್ಕೆ ನಾಲ್ಕು ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ
ಇನ್ನು ಮುಂದೆ ವರ್ಷಕ್ಕೆ ಕೇವಲ ನಾಲ್ಕು ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ದೊರೆಯಲಿದೆ. ಆ ನಂತರ ಬುಕ್ ಮಾಡುವ ಸಿಲಿಂಡರ್‌ಗಳಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ. ಈ ಹಿಂದೆ ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು, ಅದನ್ನು ಇದೀಗ ನಾಲ್ಕಕ್ಕೆ ಇಳಿಸಲಾಗಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಇಂಧನ ಸಬ್ಸಿಡಿಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ ಸುಮಾರು 10.5 ಕೋಟಿ ಬಡ ಕುಟುಂಬಗಳು ಈ ಯೋಜನೆಯ ಮೂಲಕ ಗ್ಯಾಸ್ ಸಬ್ಸಿಡಿ ಪಡೆಯುತ್ತಿವೆ.
ಬಡವರಿಗೆ ಸಂಕಷ್ಟ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ನೀಡುವ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಭಾನುವಾರ 14.2 ಕೆಜಿ ಸಿಲಿಂಡರ್ ಬೆಲೆಯನ್ನು 29 ರೂಪಾಯಿ ಹೆಚ್ಚಿಸಿದ ಬೆನ್ನಲ್ಲೇ, ಮರುದಿನವೇ ಸಬ್ಸಿಡಿಯಲ್ಲಿ ಕಡಿತಗೊಳಿಸಿ ಮತ್ತೊಂದು ಆದೇಶ ಹೊರಡಿಸಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿ 14.2 ಕೆಜಿ ಎಲ್‌ಪಿಜಿ ರಿಫಿಲ್ ಮೇಲೆ 700 ರೂಪಾಯಿ, ಪೆಟ್ರೋಲ್ ಮೇಲೆ ಲೀಟರ್‌ಗೆ 6 ರೂಪಾಯಿ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 30 ರೂಪಾಯಿ ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಸರ್ಕಾರ ಈ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ವರ್ಷಕ್ಕೆ ನಾಲ್ಕು ರಿಫಿಲ್‌ಗಳವರೆಗೆ ಮಾತ್ರ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ.
ಸಬ್ಸಿಡಿಯಲ್ಲಿ ಮತ್ತೆ ಬದಲಾವಣೆ ವಾಸ್ತವವಾಗಿ, 2025ರ ಆಗಸ್ಟ್‌ನಲ್ಲಿ ಕೇಂದ್ರ ಸಂಪುಟವು ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲು ಅನುಮೋದನೆ ನೀಡಿತ್ತು. 2016ರಲ್ಲಿ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಯೋಜನೆ ಪ್ರಾರಂಭವಾಯಿತು. ಆಗಸ್ಟ್ 2021ರಿಂದ ಕನೆಕ್ಷನ್ ಜೊತೆಗೆ ಮೊದಲ ಸಿಲಿಂಡರ್ ಉಚಿತವಾಗಿ ನೀಡಲಾಗುತ್ತಿತ್ತು. ಮೇ 2022ರಿಂದ ಸರ್ಕಾರವು 2022-23 ಮತ್ತು 2023-24ನೇ ಸಾಲಿಗೆ PMUY ಫಲಾನುಭವಿಗಳಿಗೆ ವರ್ಷಕ್ಕೆ 12 ರಿಫಿಲ್‌ಗಳವರೆಗೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಿತ್ತು. ಅಕ್ಟೋಬರ್ 2023ರಲ್ಲಿ ಸಬ್ಸಿಡಿಯನ್ನು 300 ರೂಪಾಯಿಗೆ ಹೆಚ್ಚಿಸಲಾಗಿತ್ತು. ನಂತರ 2025ರ ಆಗಸ್ಟ್ 8ರಂದು, 2025-26ನೇ ಸಾಲಿಗೆ ವರ್ಷಕ್ಕೆ ಗರಿಷ್ಠ ಒಂಬತ್ತು ರಿಫಿಲ್‌ಗಳಿಗೆ ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿತ್ತು. ಇದೀಗ ಆ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಗಿದೆ.

