ಅಮೆರಿಕ ಸೇನೆಯ ಅತ್ಯಂತ ದುಬಾರಿ ಮತ್ತು ಸುಧಾರಿತ ಕಣ್ಗಾವಲು ಡ್ರೋನ್‌ಗಳಲ್ಲಿ ಒಂದಾದ MQ-4C ಟ್ರೈಟಾನ್ (MQ-4C Triton) ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ನಿಗೂಢವಾಗಿ ನಾಪತ್ತೆಯಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಕೇವಲ ಎರಡೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ ?
ಹಾರ್ಮುಜ್ ಜಲಸಂಧಿಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಈ ಡ್ರೋನ್‌ನಿಂದ ತುರ್ತು ಸಂಕೇತಗಳು (Emergency Signals) ಲಭ್ಯವಾಗಿದ್ದವು ಎನ್ನಲಾಗಿದೆ. ಆ ಬೆನ್ನಲ್ಲೇ ಡ್ರೋನ್ ಇರಾನ್ ಕಡೆಗೆ ಸ್ವಲ್ಪ ತಿರುವು ಪಡೆದುಕೊಂಡು, ವೇಗವಾಗಿ ಕೆಳಮುಖವಾಗಿ ಚಲಿಸಿ ರಾಡಾರ್ ಪರದೆಯಿಂದ ಮಾಯವಾಗಿದೆ. ಇದು ತಾಂತ್ರಿಕ ದೋಷದಿಂದ ಪತನಗೊಂಡಿದೆಯೇ ಅಥವಾ ಯಾರಾದರೂ ಹೊಡೆದು ಉರುಳಿಸಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಸುಮಾರು ಮೂರು ಗಂಟೆಗಳ ಕಾಲ ನಿಘಾ ಕಾರ್ಯಾಚರಣೆ ಮುಗಿಸಿ ಇಟಲಿಯಲ್ಲಿರುವ ತನ್ನ ನೆಲೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದರ ಮೌಲ್ಯ ಸುಮಾರು 200 ಮಿಲಿಯನ್ ಡಾಲರ್ (ಅಂದಾಜು 1,600 ಕೋಟಿ ರೂ.) ಎಂದು ಅಂದಾಜಿಸಲಾಗಿದೆ.
MQ-4C ಟ್ರೈಟಾನ್ ಡ್ರೋನ್‌ನ ವಿಶೇಷತೆಗಳೇನು?
- ಇದು ಅಮೆರಿಕ ನೌಕಾಪಡೆಯು ಬಳಸುವ ಅತ್ಯಂತ ಸುಧಾರಿತ ಮಾನವರಹಿತ ವಿಮಾನ (Unmanned Aircraft).
- ಇದು ಭೂಮಿಯಿಂದ ಸುಮಾರು 50,000 ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿ ಸತತ 24 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು.
- ಒಂದೇ ಬಾರಿಗೆ 7,400 ನಾಟಿಕಲ್ ಮೈಲುಗಳಷ್ಟು ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
- ಸಮುದ್ರದ ಮೇಲ್ಮೈ ಮೇಲೆ ನಿಗಾ ಇರಿಸಲು ಇದು ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ಹೊಂದಿದೆ.
ಫೆಬ್ರವರಿ 28 ರಿಂದ ಯುದ್ಧದ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಹಾರ್ಮುಜ್ ಜಲಸಂಧಿಯನ್ನು ಮರುಪ್ರಾರಂಭಿಸಲು ಇರಾನ್ ಒಪ್ಪಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ವಿಶ್ವದ ಒಟ್ಟು ತೈಲ ಸಾಗಣೆಯ ಶೇ. 20ರಷ್ಟು ಈ ಮಾರ್ಗದ ಮೂಲಕವೇ ನಡೆಯುತ್ತದೆ. ಸದ್ಯಕ್ಕೆ ಈ ಬಗ್ಗೆ ಪೆಂಟಾಗನ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

