ಬೆಂಗಳೂರು : ಫೆಬ್ರವರಿ 9ರ ( ಇಂದಿನಿಂದ) ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಬಿಎಂಆರ್‌ಸಿಎಲ್ (BMRCL) ತಾತ್ಕಾಲಿಕವಾಗಿ ಕೈಬಿಟ್ಟಿದೆ. ಕೇಂದ್ರ ಸರ್ಕಾರವು ದರ ಏರಿಕೆ ಮಾಡದಂತೆ ಸೂಚನೆ ನೀಡಿ ಇ-ಮೇಲ್ ಕಳುಹಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಇದರಿಂದಾಗಿ ಇಂದಿನಿಂದ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬರೆ ತಪ್ಪಿದಂತಾಗಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಸೂಚನೆಯ ಮೇರೆಗೆ ಬಿಎಂಆರ್‌ಸಿಎಲ್ ತನ್ನ ನಿರ್ಧಾರವನ್ನು ಬದಲಿಸಿದೆ.ದರ ಏರಿಕೆ ತಡೆಯುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
BMRCL ಅಧಿಕೃತಪ್ರಕಟಣೆ: ವಾರ್ಷಿಕ ಸ್ವಯಂಚಾಲಿತ ದರ ಏರಿಕೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದ್ದು, ಆಡಳಿತ ಮಂಡಳಿಯ ಸಭೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.ದರ ಏರಿಕೆ ಸದ್ಯಕ್ಕೆ ಸ್ಥಗಿತಗೊಂಡಿರುವುದು ಬೆಂಗಳೂರಿನ ಲಕ್ಷಾಂತರ ಜನಸಾಮಾನ್ಯರಿಗೆ ನಿರಾಳ ತಂದಿದೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇದನ್ನು “ಬೆಂಗಳೂರು ಜನತೆಗೆ ಸಂದ ಜಯ” ಎಂದು ಬಣ್ಣಿಸಿದ್ದಾರೆ. ಸದ್ಯಕ್ಕೆ ಹಳೆಯ ದರದಲ್ಲೇ ಮೆಟ್ರೋ ಪ್ರಯಾಣ ಮುಂದುವರಿಯಲಿದೆ.
ನೀಡಿದ ಭರವಸೆಯಂತೆ, ಪ್ರಸ್ತಾಪಿತ ಮೆಟ್ರೋ ಭಾಡಿ ಹೆಚ್ಚಳವನ್ನು BMRCL ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಅನ್ಯಾಯಕರ ಹೆಚ್ಚಳವನ್ನು ನಿರಂತರವಾಗಿ ವಿರೋಧಿಸಿದ ಬೆಂಗಳೂರು ಜನತೆಗೆ ಇದು ಒಂದು ಜಯವಾಗಿದೆ. ರಾಜ್ಯ ಸರ್ಕಾರದ ಜನವಿರೋಧಿ ಪ್ರಸ್ತಾಪವನ್ನು ತಡೆಯಲು ಸಮಯೋಚಿತವಾಗಿ ಹಸ್ತಕ್ಷೇಪ ಮಾಡಿದ ಮಾನ್ಯ ನಗರ ವ್ಯವಹಾರಗಳ ಸಚಿವ ಶ್ರೀ ಖಟ್ಟರ್ ಜೀ ಹಾಗೂ ಭಾರತ ಸರ್ಕಾರಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ. ಹಿಂದಿನ ಸರ್ಕಾರಗಳು ಮಾಡಿದಂತೆ ರಾಜ್ಯ ಸರ್ಕಾರವು ಮೆಟ್ರೋಗೆ ಶ್ಯಾಡೋ ಕ್ಯಾಶ್ ಸಹಾಯವನ್ನು ಪುನಃ ನೀಡಬೇಕು ಮತ್ತು ನ್ಯಾಯಸಮ್ಮತ, ವೈಜ್ಞಾನಿಕ ಹಾಗೂ ಪಾರದರ್ಶಕ ಭಾಡಿ ಪರಿಷ್ಕರಣೆಗೆ ಹೊಸ ಭಾಡಿ ನಿಗದಿ ಸಮಿತಿಯನ್ನು ಪುನರ್ ರಚಿಸಲು ಮುಂದಾಗಬೇಕು. ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಕೈಗೆಟುಕುವ ಸಾರ್ವಜನಿಕ ಸಾರಿಗೆಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

