ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ನೌಕರರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಮೃತ ನೌಕರರ ವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಮಗಳು ಮತ್ತು ಸಹೋದರಿಯರಿಗೂ ಕೆಲಸ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ಅನುಕಂಪದ ನೇಮಕಾತಿಯಲ್ಲಿ ಕೆಲವು ನಿರ್ಬಂಧಗಳಿದ್ದವು. ಆದರೆ ಹೊಸ ಸುತ್ತೋಲೆಯ ಪ್ರಕಾರ, ಮೃತ ನೌಕರರನ್ನು ಅವಲಂಬಿಸಿದ್ದ ಮಗಳು ಅಥವಾ ಸಹೋದರಿ ವಿವಾಹಿತರಾಗಿದ್ದರೂ ಅವರಿಗೆ ಕೆಲಸ ನೀಡಲು ಅವಕಾಶ ನೀಡಲಾಗಿದೆ.
ಅರ್ಹತೆ ಏನು?: ಅರ್ಜಿದಾರರು ಮೃತ ನೌಕರನ ಜೀವಿತಾವಧಿಯಲ್ಲಿ ಅವರ ಮೇಲೆಯೇ ಅವಲಂಬಿತರಾಗಿದ್ದರು ಮತ್ತು ಅವರ ಜೊತೆಗೇ ವಾಸವಿದ್ದರು ಎಂಬುದಕ್ಕೆ ಸಂಬಂಧಪಟ್ಟ ತಹಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಯಾರಿಗೆ ಅನ್ವಯ?: ಮೃತ ನೌಕರನ ಅವಲಂಬಿತ ಅವಿವಾಹಿತ/ವಿವಾಹಿತ/ವಿಚ್ಛೇದಿತ ಅಥವಾ ವಿಧವೆ ಮಗಳು ಹಾಗೂ ಸಹೋದರಿಯರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು ಈ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಸಂಕಷ್ಟದಲ್ಲಿರುವ ನೌಕರರ ಕುಟುಂಬಗಳಿಗೆ ಈ ನಿರ್ಧಾರವು ದೊಡ್ಡ ಆಸರೆಯಾಗಲಿದೆ.


