ಕೊಚ್ಚಿ: ಬಿಸಿಸಿಐ (BCCI) ತನ್ನ ವಾರ್ಷಿಕ ಟಿ20 ಪಂದ್ಯಾವಳಿಗೆ ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) ಎಂಬ ಹೆಸರನ್ನು ಅಕ್ರಮವಾಗಿ ಬಳಸುತ್ತಿದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ಎರ್ನಾಕುಲಂನ ಆಶಿಕ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ಐಪಿಎಲ್ ದೇಶದ ಅಧಿಕೃತ ಕ್ರಿಕೆಟ್ ಪಂದ್ಯಾವಳಿಯಲ್ಲ, ಆದ್ದರಿಂದ ಬಿಸಿಸಿಐ ‘ಇಂಡಿಯನ್’ ಎಂಬ ಹೆಸರನ್ನು ಬಳಸುವುದು ಕಾನೂನುಬಾಹಿರ ಎಂದು ಅವರು ವಾದಿಸಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ.ಎಂ. ಅವರಿದ್ದ ವಿಭಾಗೀಯ ಪೀಠವು ಈ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್!
ಐಪಿಎಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎದುರಾಗಿದ್ದ ಅನಿಶ್ಚಿತತೆ ಕೊನೆಗೊಂಡಿದೆ. ಕರ್ನಾಟಕ ಸರ್ಕಾರವು ಪಂದ್ಯಗಳ ಆಯೋಜನೆಗೆ ಅಧಿಕೃತ ಅನುಮತಿ ನೀಡಿದೆ.ಕಳೆದ ವರ್ಷ (RCB) ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದ ಘಟನೆಯ ನಂತರ, ಈ ಮೈದಾನದಲ್ಲಿ ಯಾವುದೇ ಹೈ-ಪ್ರೊಫೈಲ್ ಕ್ರಿಕೆಟ್ ಪಂದ್ಯಗಳು ನಡೆದಿರಲಿಲ್ಲ.
ಉದ್ಘಾಟನಾ ಪಂದ್ಯ : ಐಪಿಎಲ್ 19ನೇ ಆವೃತ್ತಿಯು ಮಾರ್ಚ್ 28 ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

