ಬೆಂಗಳೂರು: ಅನಧಿಕೃತವಾಗಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆದವರಿಗೆ ಅಕ್ರಮ -ಸಕ್ರಮ ಯೋಜನೆ ಅಡಿ ಸಕ್ರಮಗೊಳಿಸಲು ಮೂರು ತಿಂಗಳ ಅವಕಾಶ ನೀಡಲಾಗಿದೆ. ನಿಗದಿತ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಸ್ತಾಪಿಸಿದ ವಿಚಾರಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದು, ಅನಧಿಕೃತ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಲು ಒಂದು ಕೃಷಿ ಪಂಪ್ಸೆಟ್ ಗೆ ಸುಮಾರು 4.5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಸರ್ಕಾರವೇ ಮೂರು ಲಕ್ಷ ರೂಪಾಯಿ ಭರಿಸುತ್ತಿದೆ. ಬಾಕಿ 1.5 ಲಕ್ಷ ರೂ.ಗಳನ್ನು ಬಳಕೆದಾರರು ಪಾವತಿಸಬೇಕು. ಕೆಲವರು ಈ ಶುಲ್ಕ ಪಾವತಿಸಿಲ್ಲ. ಅವರಿಗೆ ಮೂರು ತಿಂಗಳು ಅವಕಾಶ ನೀಡಲಾಗಿದ್ದು, ಹಣ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

