ಬೆಂಗಳೂರು: ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಜ್ಞರ ಸಮಿತಿ ವಿರೋಧಿಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೈಕೋರ್ಟ್ ಗೆ ತಿಳಿಸಿದೆ.
ಯೋಜನೆಯನ್ನು ಪ್ರಶ್ನಿಸಿ ಸಾಗರದ ಪರಿಸರವಾದಿ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ. ರವೀಂದ್ರನಾಥ್ ಶಾನ್ ಭಾಗ್ ಮತ್ತು ಶಿವಮೊಗ್ಗದ ಸಿ.ಬಿ. ಮನೋಹರ ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ರಚಿಸಿದ ಮೂವರು ಸದಸ್ಯರ ತಜ್ಞರ ಸಮಿತಿಯು ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಪ್ರಸ್ತಾಪಿಸಲಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅಭಯಾರಣ್ಯದ ಪರಿಸರ, ಜೀವ ವೈವಿಧ್ಯ, ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಯೋಜನೆಗೆ ಅನುಮೋದನೆ ನೀಡಬಾರದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರ ಎ.ಎಸ್.ಜಿ. ಅರವಿಂದ ಕಾಮತ್, 2025 ರ ಡಿಸೆಂಬರ್ 27ರಿಂದ 30ರವರೆಗೆ ಸ್ಥಳ ಪರಿಶೀಲನೆ ನಡೆಸಿ ತಜ್ಞರ ಸಮಿತಿ ಸಲ್ಲಿಸಿದ ವರದಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ, ವರದಿ ಆಧರಿಸಿ ವನ್ಯಜೀವಿ ಮಂಡಳಿ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ, ಹೀಗಾಗಿ ಮಂಡಳಿಯ ನಿಲುವು ತಿಳಿಸಲು ಕಾಲಾವಕಾಶ ಕೋರಿದ್ದಾರೆ,
ಈ ಯೋಜನೆ ಪರಿಸರದ ಸಮಗ್ರತೆಗೆ ಗಣನೀಯ ಮತ್ತು ಬದಲಾಯಿಸಲಾಗದ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ಗಂಭೀರ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಮಿತಿ ಹೇಳಿದೆ. ಜೀವ ವೈವಿಧ್ಯ ಸಂರಕ್ಷಣೆ, ಪಶ್ಚಿಮ ಘಟ್ಟಗಳ ಸಂರಕ್ಷಿತ ಪ್ರದೇಶದೊಳಗಿನ ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳ ಉಳಿವಿನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಜ್ಞರ ಸಮಿತಿ ವರದಿ ಮತ್ತು ವನ್ಯಜೀವಿ ಮಂಡಳಿ ಇನ್ನು ಯಾವುದೇ ನಿರ್ಧಾರ ಕೈಗೊಳ್ಳದಿರುವುದನ್ನು ದಾಖಲಿಸಿ ಕೇಂದ್ರ ಸರ್ಕಾರಕ್ಕೆ ಸಮಯ ನೀಡಿ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಹೈಕೋರ್ಟ್ ವಿಭಾಗೀಯಪೀಠ 2026 ರ ಮಾರ್ಚ್ 10ರಂದು ಆತಂಕ ವ್ಯಕ್ತಪಡಿಸಿ, ಅಭಯಾರಣ್ಯ ಅಥವಾ ಅದರ ಪರಿಸರ ಸೂಕ್ಷ್ಮ ವಲಯದೊಳಗೆ ಯಾವುದೇ ರೀತಿಯ ಕಾಮಗಾರಿ ನಡೆಸಿದಂತೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.

