ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸರ್ಕಾರಿ ನೌಕರರ ವಿರುದ್ಧದ ತನಿಖೆಗೆ ಪೂರ್ವಾನುಮತಿ ಕಡ್ಡಾಯಗೊಳಿಸುವ 2018ರ ಭ್ರಷ್ಟಾಚಾರ ವಿರೋಧಿ ಕಾನೂನಿನ ಸಾಂವಿಧಾನಿಕ ಮಾನ್ಯತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಂಗಳವಾರ ಭಿನ್ನವಾದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಭ್ರಷ್ಟಾಚಾರ ನಿಗ್ರಹದಳದ ಸೆಕ್ಷನ್ 17ನೇ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ರದ್ದು ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಸೆಕ್ಷನ್ ಸಂವಿಧಾನ ಬದ್ಧವಾಗಿದೆ. ಪ್ರಾಮಾಣಿಕ ಅಧಿಕಾರಿಯನ್ನು ರಕ್ಷಿಸಲು ಇದರಿಂದ ನೆರವಾಗುತ್ತದೆ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ಕ್ಕೆ 2018ರಲ್ಲಿ ಸೆಕ್ಷನ್ 17 ಸೇರ್ಪಡೆ ಮಾಡಲಾಗಿತ್ತು. ಈ ಸೆಕ್ಷನ್ ಸೂಕ್ತ ಪ್ರಾಧಿಕಾರದ ಅನುಮೋದನೆ ಇಲ್ಲದೆ ಯಾವುದೇ ಸರ್ಕಾರಿ ನೌಕರರ ವಿರುದ್ಧ ವಿಚಾರಣೆ ನಿರ್ಬಂಧಿಸುತ್ತದೆ. ಈ ಸೆಕ್ಷನ್ ಸಂಬಂಧ ಎನ್‌ಜಿಒ ಒಂದು ಸಲ್ಲಿಸಿದ್ದ ಪಿಐಎಲ್ ವಿಚಾರಣೆಯ ಮೇಲೆ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠವು ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ವಿಸ್ತೃತ ಪೀಠದ ಮುಂದೆ ಬರಲಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿಸ್ತೃತ ಪೀಠ ರಚಿಸಬೇಕಿದ್ದು, ಅಲ್ಲಿಯೇ ಪ್ರಕರಣ ಇತ್ಯರ್ಥವಾಗಬೇಕಿದೆ.

