ಗ್ರಾಮೀಣ ಅನಧಿಕೃತ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಬಿ ಖಾತಾ ವಿತರಣೆ ಶೀಘ್ರ: ಕಂದಾಯ ಗ್ರಾಮ ರಚನೆಗೆ ಜೂ. 30ರ ಗಡುವು

ಚಿತ್ರದುರ್ಗ: ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸೂಚನೆ ನೀಡಿದರು.

ಕಂದಾಯ ಗ್ರಾಮಗಳ ರಚನೆಗೆ ಜಿಲ್ಲೆಯಲ್ಲಿ ಒಟ್ಟು 316 ಗ್ರಾಮಗಳ ಗುರುತಿಸಲಾಗಿದ್ದು, ಈಗಾಗಲೇ 296 ಪ್ರಾಥಮಿಕ ಸೂಚನೆ ಹಾಗೂ 206 ಅಂತಿಮ ಅಧಿಸೂಚನೆಯಾಗಿದೆ. ಇನ್ನೂ 61 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

 ಗ್ರಾಮ ಪಂಚಾಯಿತಿಯಲ್ಲಿ ವಸತಿ ಪ್ರದೇಶಗಳ ಪಟ್ಟಿ ಇದೆ. ಕಂದಾಯ ಗ್ರಾಮಗಳ ಸಂಖ್ಯೆಗಿಂತ ವಸತಿ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳ ಎಂಟ್ರಿ ಇರುತ್ತವೆ. ಕಂದಾಯ ಇಲಾಖೆಯ ಬಳಿ ದಾಖಲೆ ಸಹಿತ ಗ್ರಾಮಗಳ ಮಾಹಿತಿ ಇರುತ್ತದೆ ಎಂದು ತಿಳಿಸಿದ ಅವರು, ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗಮನಿಸಿ, ಗ್ರಾಮ ರಚನೆ ಮಾಡಬೇಕು. ದಾಖಲೆ ರಹಿತ ಇದ್ದಲ್ಲಿ ಅವರಿಗೆ ಒಂದು ದಾಖಲೆ ಕಲ್ಪಿಸಿ, ಬದುಕು ಕಲ್ಪಿಸಿಕೊಡಬೇಕಿದೆ. ಈಗಾಗಲೆ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ನಿವೇಶನ, ಕಟ್ಟಡಗಳಿಗೆ ಬಿ-ಖಾತಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.  ಅದೇ ರೀತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿಯೂ ಅನಧಿಕೃತವಾಗಿ ರಚನೆಯಾಗಿರುವ ಕಂದಾಯ ನಿವೇಶನ, ಕಟ್ಟಡಗಳಿಗೂ ಬಿ-ಖಾತಾ ವಿತರಣೆಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಹತ್ತು ದಿನಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಜನರ ಬದುಕಿಗೆ ನಿಶ್ಚಿತತೆ ಇರಬೇಕು. ಹಾಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಚಿವರು ಹೇಳಿದರು.

 ಕಂದಾಯ ಗ್ರಾಮಗಳ ರಚನೆ ಕುರಿತಂತೆ ಜೂನ್ 30 ರ ಗಡುವನ್ನು ನಿಗದಿಪಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಜನಗಣತಿ ಕಾರ್ಯದ ಪ್ರಕ್ರಿಯೆ ಆರಂಭವಾದರೆ, ಹೊಸ ಕಂದಾಯ ಘಟಕಗಳ ರಚನೆಗೆ ನಿಷೇಧ ಅನ್ವಯ ಆಗಲಿದೆ.  ಈ ನಿಷೇಧ ತೆರವಾಗಲು ಎರಡು ವರ್ಷ ಆಗಬಹುದು.  ಹೀಗಾಗಿ ಬಾಕಿ ಇರುವ ಎಲ್ಲ ಕಂದಾಯ ಗ್ರಾಮಗಳ ರಚನೆ ಕಾರ್ಯ ಜೂ. 30 ರ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.

      ಗ್ರಾಮದ 1 ಕಿ.ಮೀ ವ್ಯಾಪ್ತಿ ಒಳಗೆ ಇದ್ದು, 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ರಚನೆ ಮಾಡಲು ಅವಕಾಶ ಇದೆ. ಜನರಿಗೆ ನಾವು ಸ್ಥಿರ ಬದುಕು ನೀಡಬೇಕು. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಯಾದವ ಹಾಗೂ ತಾಂಡಾ ಸಂಘದವರಿಂದ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಯಿಂದ ಜನವಸತಿ ಪಟ್ಟಿ ಪಡೆಯುವಂತೆ ಸಚಿವರು ಸೂಚನೆ ನೀಡಿದರು.

ಕಂದಾಯ ಗ್ರಾಮಗಳ ಫಲಾನುಭವಿಗಳ ಹಕ್ಕುಪತ್ರ ನೊಂದಣಿ :

ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಆಸ್ತಿ ನೊಂದಣಿಗೆ ಸಂಬಂಧಿಸಿದಂತೆ ಒಟ್ಟು 6393 ಕುಟುಂಬಗಳ ದಾಖಲೆಗಳಿಗೆ ಆಯಾ ತಹಸಿಲ್ದಾರರು ಅನುಮೋದನೆ ನೀಡಿದ್ದು, 4305 ಡೀಡ್‍ಗಳಿಗೆ ತಹಸಿಲ್ದಾರರು ಸಹಿ ಮಾಡಿರುತ್ತಾರೆ. ಈವರೆಗೆ 2888 ಫಲಾನುಭವಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದ್ದು, 2403 ಫಲಾನುಭವಿಗಳ ಇ-ಸ್ವತ್ತು ನೋಟಿಸ್ ಜನರೇಟ್ ಮಾಡಲಾಗಿದೆ.  ಎಲ್ಲ ಫಲಾನುಭವಿಗಳ ಹಕ್ಕುಪತ್ರ ನೋಂದಣಿ ದಾಖಲೆ ಹಾಗೂ ಇ-ಸ್ವತ್ತು ತಯಾರಿಸುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಕಂದಾಯ ಸಚಿವರಿಗೆ ಭರವಸೆ ನೀಡಿದರು.

ಭೂ ಸುರಕ್ಷಾ ಯೋಜನೆಗೆ ವೇಗ ನೀಡಿ:

ಭೂ ಸುರಕ್ಷಾ ಯೋಜನೆಯನ್ನು ಭೂ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಈ ಯೋಜನೆಯಡಿ ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ ತಾಲ್ಲೂಕುಗಳು ಉತ್ತಮ ಸಾಧನೆ ತೋರಿದ್ದು, ಉಳಿದ ಮೂರು ತಾಲ್ಲೂಕುಗಳು ಸಹ ತ್ವರಿತಗತಿಯಲ್ಲಿ ಆಗಬೇಕು. ಜಿಲ್ಲೆಯಲ್ಲಿ ಸರಾಸರಿ 10 ಸಾವಿರ ಪುಟಗಳ ಸ್ಕ್ಯಾನ್ ಹಾಗೂ ಆಪ್‍ಲೋಡ್ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read