ಚಿತ್ರದುರ್ಗ: ಉಪ ಚುನಾವಣೆಯ ನಂತರ ಒಳ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಉಪ ಚುನಾವಣೆಯ ನಂತರ ಒಳ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರೂ ನ್ಯಾಯಾಲಯದ ನಿರ್ದೇಶನದಂತೆ ನಡೆಯಬೇಕಿದೆ. ಹೀಗಾಗಿ ಎಲ್ಲಾ ಸಮುದಾಯಗಳ ಮುಖಂಡರ ಜೊತೆಗೆ ಚರ್ಚಿಸುತ್ತೇವೆ. ವಿಶೇಷ ಸಂಪುಟ ಸಭೆಯಲ್ಲಿ ಜಾರಿಗೆ ತರುವ ಯತ್ನ ನಡೆದರೂ ಉಪ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಒಳ ಮಿಸಲಾತಿ ಜಾರಿ ಮುಂದೂಡಲಾಗಿದೆ. ಉಪಚುನಾವಣೆ ಮುಗಿದ ನಂತರ ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

