ನವದೆಹಲಿ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಲಿದೆ.
ಅದೇ ರೀತಿ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
ಅಸ್ಸಾಂನಲ್ಲಿ ಬಿಜೆಪಿ, ಕಾಂಗ್ರೆಸ್, ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ- ಬಿಜೆಪಿ ಮೈತ್ರಿಕೂಟ, ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ ಮತ್ತು ವಿಜಯ್ ಅವರ ಟಿವಿಕೆ, ಕೇರಳದಲ್ಲಿ ಯುಡಿಎಫ್, ಎಲ್.ಡಿ.ಎಫ್., ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ಹಾಗೂ ಪುದುಚೇರಿಯಲ್ಲಿ ಎನ್.ಡಿ.ಎ. ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ಹಣಾಹಣಿ ಇದೆ. ಚುನಾವಣಾ ಸಮೀಕ್ಷೆಗಳಲ್ಲಿ ಅಸ್ಸಾಂನಲ್ಲಿ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಲಾಗಿದ್ದು, ಮಧ್ಯಾಹದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮತ ಎಣಿಕೆಗೆ ಸಕಲ ಸಿದ್ಧತೆ
ಮತ ಎಣಿಕೆ ಕೇಂದ್ರದಲ್ಲಿ ಇವಿಎಂ (EVM) ಎಣಿಕೆಗಾಗಿ ಒಂದು ಕೊಠಡಿ ಹಾಗೂ ಅಂಚೆ ಮತಪತ್ರಗಳ (Postal Ballot) ಎಣಿಕೆಗಾಗಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಮೇ 4 ರಂದು ಬೆಳಗ್ಗೆ 7:30ಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಗುವುದು. ಬೆಳಗ್ಗೆ 8:00 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದ್ದು, 8:30ಕ್ಕೆ ಇವಿಎಂ ಯಂತ್ರಗಳ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ.
ಮತ ಎಣಿಕೆಗಾಗಿ ಒಟ್ಟು 14 ಟೇಬಲ್ಗಳನ್ನು ಅಳವಡಿಸಲಾಗಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್ (ETPBMS) ಗಾಗಿ ಪ್ರತ್ಯೇಕವಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. 21 ಸುತ್ತಗಳ ಮತ ಎಣಿಕೆ ಕಾರ್ಯ ನಡೆಯಲಿದೆ, ಪ್ರತಿ ಟೇಬಲ್ಗೆ ಕೌಂಟಿಂಗ್ ಸೂಪರ್ವೈಸರ್, ಮೈಕ್ರೋ ಅಬ್ಸರ್ವರ್ ಹಾಗೂ ಕೌಂಟಿಂಗ್ ಅಸಿಸ್ಟೆಂಟ್ಗಳನ್ನು ನೇಮಿಸಲಾಗಿದೆ. ಎಣಿಕೆ ಕಾರ್ಯದ ದಿನ ಬೆಳಗ್ಗೆ 5:00 ಗಂಟೆಗೆ ಸಿಬ್ಬಂದಿಗಳಿಗೆ ಅಂತಿಮ ಹಂತದ ಟೇಬಲ್ ಹಂಚಿಕೆ ಪ್ರಕ್ರಿಯೆ (Third Randomization) ನಡೆಯಲಿದೆ.
ಮತ ಎಣಿಕೆ ಕೇಂದ್ರದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೂರು ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ, ಮೊದಲ ಹಂತದದಲ್ಲಿ ಮತ ಎಣಿಕೆ ಕೇಂದ್ರದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಪಾದಚಾರಿ ವಲಯವೆಂದು ಘೋಷಿಸಲಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೇಂದ್ರದ ಎರಡನೇ ಹಂತದಲ್ಲಿ ಡಿ.ಎ.ಆರ್ (DAR) ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಮೂರನೇ ಹಂತದಲ್ಲಿ ಮತ ಎಣಿಕೆ ಕೊಠಡಿಯ ಪ್ರವೇಶ ದ್ವಾರದಲ್ಲಿ ಸಿ.ಐ.ಎಸ್.ಎಫ್ (CISF) ಸಿಬ್ಬಂದಿಗಳು ಅತ್ಯಾಧುನಿಕ ತಪಾಸಣೆ ನಡೆಸಲಿದ್ದಾರೆ.
ಪ್ರಸ್ತುತ ಕ್ಷೇತ್ರದಲ್ಲಿ 25 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪ್ರತಿ ಟೇಬಲ್ಗೆ ಒಬ್ಬರಂತೆ ಅಭ್ಯರ್ಥಿಗಳು ತಮ್ಮ ಏಜೆಂಟ್ಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ, ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅಧಿಕೃತ ಪಾಸ್ ಇಲ್ಲದ ಯಾರಿಗೂ ಎಣಿಕೆ ಕೇಂದ್ರದ ಒಳಗೆ ಪ್ರವೇಶವಿರುವುದಿಲ್ಲ. ಈ ಬಾರಿಯ ವಿಶೇಷವೆಂದರೆ, ಅಭ್ಯರ್ಥಿಗಳು, ಏಜೆಂಟರು ಹಾಗೂ ಸಿಬ್ಬಂದಿಗಳಿಗೆ ಕ್ಯೂ.ಆರ್ (QR) ಕೋಡ್ ಹೊಂದಿರುವ ಡಿಜಿಟಲ್ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಸಿ.ಐ.ಎಸ್.ಎಫ್ ಸಿಬ್ಬಂದಿಗಳು ಮೊಬೈಲ್ ಆಪ್ ಮೂಲಕ ಈ ಕೋಡ್ ಸ್ಕ್ಯಾನ್ ಮಾಡಿ ಅಧಿಕೃತತೆಯನ್ನು ಖಚಿತಪಡಿಸಿಕೊಂಡ ನಂತರವೇ ಒಳಗೆ ಬಿಡಲಿದ್ದಾರೆ.
ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಾಧ್ಯಮದವರಿಗಾಗಿ ಪ್ರತ್ಯೇಕ ಮೀಡಿಯಾ ಸೆಂಟರ್ ಸ್ಥಾಪಿಸಲಾಗಿದ್ದು, ಅಲ್ಲಿ ಇಂಟರ್ನೆಟ್ ಹಾಗೂ ಫಲಿತಾಂಶ ವೀಕ್ಷಣೆಗೆ ಸ್ಮಾರ್ಟ್ ಟಿವಿ ವ್ಯವಸ್ಥೆ ಮಾಡಲಾಗಿದೆ, ಚುನಾವಣೆಯ ಎಣಿಕೆ ಕಾರ್ಯಕ್ಕೆ ಸಂಪೂರ್ಣವಾಗಿ ಸಿಸಿಟಿವಿ ಅಳವಡಿಸಲಾಗಿದೆ ಹಾಗೂ ವಿಡಿಯೋಗ್ರಾಫಿ ಮಾಡಲಾಗುತ್ತದೆ.
ಪ್ರತಿ ಸುತ್ತಿನ ಎಣಿಕೆಯ ನಂತರ ಫಲಿತಾಂಶದ ವಿವರಗಳನ್ನು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಆನ್ಲೈನ್ ಮೂಲಕ ಮಾಧ್ಯಮಗಳಿಗೆ ತಕ್ಷಣವೇ ಒದಗಿಸಲಾಗುವುದು, ಚುನಾವಣಾ ನೀತಿ ಸಂಹಿತೆ (MCC) ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ವಿಜಯೋತ್ಸವ ಅಥವಾ ಮೆರವಣಿಗೆಗಳನ್ನು ನಡೆಸುವಂತಿಲ್ಲ ಎಂದು ಹೇಳಲಾಗಿದೆ.

